ಕರಾವಳಿ

ದೀಪಕ್ ರಾವ್ ಹತ್ಯೆ : ಆಸ್ಪತ್ರೆಗೆ ನುಗ್ಗಿದ ಕಾರ್ಯಕರ್ತರು -ವ್ಯಾಪಕ ಆಕ್ರೋಷ -ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ.03 ದುಷ್ಕರ್ಮಿಗಳಿಂದ ಹಾಡಹಗಲೇ ಬರ್ಬರವಾಗಿ ಹತ್ಯೆಗೀಡಾದ ಕಾಟಿಪಳ್ಳ ಕೈಕಂಬದ ನಿವಾಸಿ ದೀಪಕ್ ರಾವ್ ಹತ್ಯಾ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ದೀಪಕ್ ರಾವ್ ಅನ್ನು ನಗರದ ಎ.ಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆ ತಲುಪುವ ಮೊದಲೇ ದೀಪಕ್ ರಾವ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಅಸ್ಪತ್ರೆಯ ಶವಗಾರದ ಬಳಿ ಜಮಾಯಿಸಿ ಘಟನೆ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.

ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಲು ಪೊಲೀಸರು ವಿಫಲವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಮಂಗಳೂರು ನಗರ ಪೊಲೀಸ್ ಅಯುಕ್ತ ಸುರೇಶ್ ಕುಮಾರ್ ಅವರನ್ನು ಹಿಂದೂ ಸಂಘಟನೆಯ ಮುಖಂಡರು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲದೇ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಹಿಂದೂ ಸಂಘಟನೆಯ ಮುಖಂಡರಾದ ಆರ್ ಎಸ್ ಎಸ್ ಮುಖಂಡ ಪ್ರಕಾಶ್ ಪಿ.ಎಸ್. ಬಜರಂಗದಳದ ಕರ್ನಾಟಕ ಪ್ರಾಂತ್ಯ ಸಂಚಾಲಕ ಶರಣ್ ಪಂಪ್‌ವೆಲ್, ವಿವಿಧ ಹಿಂದೂ ಸಂಘಟನೆಗಳ ಪ್ರಮುಖರಾದ ಜಿತೇಂದ್ರ ಕೊಟ್ಟಾರಿ,ವೈ. ಭರತ್ ಶೆಟ್ಟಿ, ಬೃಜೇಶ್ ಚೌಟ, ಗಣೇಶ್ ಹೊಸಬೆಟ್ಟು ಹಾಗೂ ಮತ್ತಿತ್ತರರು ಈ ವೇಳೆ ಉಪಸ್ಥಿತರಿದ್ದರು.

ಕಾಟಿಪಳ್ಳ ಕೈಕಂಬದ ನಿವಾಸಿ ದೀಪಕ್ ರಾವ್ (32) ರನ್ನು ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಬರ್ಬರವಾಗಿ ಹತ್ಯೆಗೈದಿತ್ತು. ಮಂಗಳವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ದೀಪಕ್ ಅವರು ದ್ವಿಚಕ್ರ ವಾಹನದಲ್ಲಿ ಕೃಷ್ಣಾಪುರ-ಕಾಟಿಪಳ್ಳ ರಸ್ತೆಯಲ್ಲಿ ಹೋಗುತ್ತಿದ್ದರು.

ಇದೇ ಸಂದರ್ಭ ಅವರನ್ನು ಕಾರೊಂದು ಹಿಂಬಾಲಿಸಿಕೊಂಡು ಬಂದಿದ್ದು, ಕಾಟಿಪಳ್ಳದ ಸಮೀಪ ಅವರ ವಾಹನವನ್ನು ತಡೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ದೀಪಕ್ ರನ್ನು ನಗರದ ಎ.ಜೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತಾದರೂ ಅವರು ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದರು.

ಸುರತ್ಕಲ್ : ನಾಲ್ಕು ಮಂದಿ ದುಷ್ಕರ್ಮಿಗಳ ತಂಡದಿಂದ ಯುವಕನ ಕಡಿದು ಕೊಲೆ

Comments are closed.