ಮಂಗಳೂರು,ಜನವರಿ 3: ದ.ಕ.ಜಿಲ್ಲೆಯ ಸುರತ್ಕಲ್ ಸಮೀಪ ಕಾಟಿಪಳ್ಳದಲ್ಲಿ ಬುಧವಾರ ಮಧ್ಯಾಹ್ನ ಹಾಡುಹಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಹಿಂದೂ ಯುವಕನ ಹತ್ಯೆ ಕುರಿತು ನವದೆಹಲಿಯಲ್ಲಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಸಂಸದರು, “ದೀಪಕ್ ಕೊಲೆಯ ಹಿಂದೆ ಉಗ್ರರನ್ನು ಬೆಂಬಲಿಸುವವರ ಕೈವಾಡವಿದೆ. ಹಿಂದೂ ಕಾರ್ಯಕರ್ತರ ಕೊಲೆಗೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ ರಾಜ್ಯ ಸರಕಾರದ ತನಿಖೆ ಮೇಲೆ ನಮಗೆ ನಂಬಿಕೆಯಿಲ್ಲ. ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು,” ಜೊತೆಗೆ ದೀಪಕ್ ರಾವ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು,” ಎಂದು ಆಗ್ರಹಿಸಿದ್ದಾರೆ.
ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಇಂದು ಮಧ್ಯಾಹ್ನ ಸುಮಾರು 1.30ಕ್ಕೆ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ರಾವ್ (32) ಕೊಲೆ ಮಾಡಲಾಗಿದೆ. ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ದೀಪಕ್ ಸ್ಥಳೀಯ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರ ಗಾಯಗೊಂಡ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.
ಮಜೀದ್ ಎಂಬವರ ಮೊಬೈಲ್ ಶಾಪ್ ನಲ್ಲಿ ದೀಪಕ್ ಕೆಲಸಕ್ಕಿದ್ದರು ಎಂದು ಹೇಳಲಾಗಿದೆ. ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಾಸಾಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬೈಕನ್ನು ಅಡ್ಡಗಟ್ಟಿ ಕಾಟಿಪಳ್ಳದ ಮೂಡಾಯಿಕೋಡಿ ಎಂಬಲ್ಲಿ ಹತ್ಯೆ ಮಾಡಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.
Comments are closed.