ಕನ್ನಡದ ಮಿಲನ, ಮಳೆ ಬರಲಿ ಮಂಜು ಇರಲಿ, ಅಂದರ್ ಬಾಹರ್ ಚಿತ್ರಗಳಲ್ಲಿ ಅಭಿನಯಿಸಿರುವ ಬಹುಭಾಷಾ ತಾರೆ ಪಾರ್ವತಿ ವಿರುದ್ಧ ಸೈಬರ್ ಕಿರುಕುಳ (ಸೈಬರ್ ಬುಲಿಯಿಂಗ್) ನಡೆದಿದೆ. ಇದಕ್ಕೆ ಕಾರಣವಾಗಿರುವುದು ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅಭಿನಯದ ‘ಕಸಬ’ ಚಿತ್ರದ ಬಗೆಗಿನ ಅವರ ವಿವಾದಾಸ್ಪದ ಹೇಳಿಕೆ.
ಮಮ್ಮುಟ್ಟಿ ಅಭಿನಯದ ‘ಕಸಬ’ ಚಿತ್ರದಲ್ಲಿ ಮಹಿಳೆಯರಿಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ, ‘ಈ ರೀತಿಯ ಸಿನಿಮಾವನ್ನು ನಾನು ವೀಕ್ಷಿಸಬಾರದಿತ್ತು’ ಎಂದು ಕಾಮೆಂಟ್ ಮಾಡಿದ್ದರು. ಇದರಿಂದ ಮಮ್ಮುಟ್ಟಿ ಅಭಿಮಾನಿಗಳು ಪಾರ್ವತಿ ವಿರುದ್ಧ ಸಿಡಿದು ಬಿದ್ದಿದ್ದಾರೆ.
ಪಾರ್ವತಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಕೊಲೆ ಮಾಡುವುದಾಗಿ ರೇಪ್ ಮಾಡುವುದಾಗಿ ಕಾಮೆಂಟ್ಗಳು ಹರಿದುಬರುತ್ತಿವೆ. ಈ ಸಂಬಂಧ ಪಾರ್ವತಿ ಕೇರಳ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ ಪಾರ್ವತಿ ವಿರುದ್ಧದ ಟೀಕಾ ಪ್ರಹಾರ ಮಾತ್ರ ಇನ್ನೂ ಮುಂದುವರೆಯುತ್ತಲೇ ಇದೆ.
ಮಲಯಾಳಂ ನಟ ಪೃಥ್ವಿರಾಜ್ ಜತೆಗೆ ಅಭಿನಯಿಸಿರುವ ‘ಮೈ ಸ್ಟೋರಿ’ ಚಿತ್ರದ ಹಾಡೊಂದು ಇತ್ತೀಚೆಗೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಯಿತು. ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ಪಾರ್ವತಿ ವಿರೋಧಿಗಳು ಅಲ್ಲೂ ಕಾಮೆಂಟ್ಗಳ ಸುರಿಮಳೆ ಹರಿಸಿದ್ದಾರೆ. ಇದುವರೆಗೆ ಹಾಡಿನ ಮೇಕಿಂಗ್ ವೀಡಿಯೋಗೆ 85 ಸಾವಿರ ಡಿಸ್ಲೈಕ್ಸ್ ನೀಡಿದ್ದರೆ ಕೇವಲ 8 ಸಾವಿರ ಲೈಕ್ಸ್ ಮಾತ್ರ ಸಿಕ್ಕಿದೆ. ವೀಡಿಯೋ ಹಾಡಿಗೆ 104 ಸಾವಿರ ಡಿಸ್ಲೈಕ್ಸ್ ನೀಡಿದ್ದರೆ ಕೇವಲ 29 ಸಾವಿರ ಲೈಕ್ಸ್ ನೀಡಿದ್ದಾರೆ. ಒಟ್ಟಾರೆ ಈ ಮೂಲಕ ಪಾರ್ವತಿ ವಿರುದ್ಧ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.
ತಾನು ಸಿನಿಮಾದ ಬಗ್ಗೆ ಹೇಳಿದ್ದೇನೇ ಹೊರತು ಮಮ್ಮುಟ್ಟಿ ಬಗ್ಗೆ ಏನೂ ಹೇಳಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದರೂ ಮಮ್ಮುಟ್ಟಿ ಅಭಿಮಾನಿಗಳು ಮಾತ್ರ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇನ್ನೊಂದು ಕಡೆ ಮಮ್ಮುಟ್ಟಿ ಸಹ ಮೌನಕ್ಕೆ ಶರಣಾಗಿರುವುದು ಅವರ ಅಭಿಮಾನಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ.
Comments are closed.