ಕರಾವಳಿ

ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್.ಐ.ಎ.ತನಿಖೆಗೆ ಒಪ್ಪಿಸಲು ಕ್ಯಾ.ಕಾರ್ಣಿಕ್ ಆಗ್ರಹ

Pinterest LinkedIn Tumblr

ಮಂಗಳೂರು, ಜನವರಿ,03 : ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಯುವಕ ದೀಪಕ್‌ ರಾವ್‌ನನ್ನು‌ ಅಮಾನುಷವಾಗಿ ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ದೀಪಕ್‌ ರಾವ್‌ ಹತ್ಯಾ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ನಡೆದ ಇತರ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್.ಐ.ಎ. ತನಿಖೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಹಿಂದೂ ಯುವಕರ ಅನೇಕ ಹತ್ಯೆಗಳು ನಡೆದರೂ ಸರಕಾರ ಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಹಂತಕರು ಅಲ್ಪಸಂಖ್ಯಾತ ಕೋಮಿನವರೆನ್ನುವ ಕಾರಣಕ್ಕೆ ಮೃದು ಧೋರಣೆ ತೆಳೆಯುವ ಮೂಲಕ ಇನ್ನಷ್ಟು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳಲು ಸಹಕಾರ ನೀಡುತ್ತಿದೆ.

ಈ ಭಾಗದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕ್ರಿಮಿನಲ್‌ಗಳನ್ನು ಪೋಷಿಸುತ್ತಿರುವುದೇ ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಮತಗಳ ಒಲೈಕೆಗಾಗಿ ಹಿಂದೂ ಕಾರ್ಯಕರ್ತರ ಹತ್ಯೆ ತನಿಖೆ ಪ್ರಕರಣಗಳಿಗೆ ತಿಲಾಂಜಲಿ ನೀಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಸರ್ಕಾರ ಇದಕ್ಕೆ ತಕ್ಕ ಬೆಲೆತೆರುವುದು ಖಂಡಿತ.

ಪೊಲೀಸ್ ಇಲಾಖೆ ಕೂಡಲೆ ಕಾರ್ಯಪ್ರವೃತ್ತರಾಗಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಹಂತಕರ ವಿರುದ್ಧ ಉಗ್ರ ಕಾನೂನು ಕ್ರಮಕೈಗೊಳ್ಳುವುದರೊಂದಿಗೆ ಇಂತಹ ಹತ್ಯೆಗಳ ಹಿಂದಿರುವ ಮಾಸ್ಟರ್ ಮೈಂಡ್ ಗಳನ್ನು ಶಿಕ್ಷೆ ಗುರಿಪಡಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಕಾನೂನು ಕ್ರಮ ಜರುಗಿಸುವಾಗ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವಂತೆ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರ ಹಿಂದೂ ಕಾರ್ಯಕರ್ತರ ಹತ್ಯೆಯ ವಿಚಾರದಲ್ಲಿ ತನ್ನ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದೆ.

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು ರಾಜ್ಯದ ಕಾಂಗ್ರೇಸ್ ಸರ್ಕಾರದಿಂದ ನ್ಯಾಯ ಒದಗಿಸುವ ಭರವಸೆ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಎನ್.ಐ.ಎ. ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸುವುದಾಗಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.