ಬೆಂಗಳೂರು: ಚನ್ನಪಟ್ಟಣದಲ್ಲಿ ಸಂಬಂಧಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ಮಧ್ಯೆ ಜಟಾಪಟಿ ಆರಂಭವಾಗಿದೆ.
ಸಹೋದರಿಯ ಪತಿ ಹಾಗೂ ಬ್ಯಾಂಕ್‌ವೊಂದರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿರುವ ಶರಶ್ಚಂದ್ರ ಅವರನ್ನು ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸುರೇಶ್ ಉತ್ಸಾಹಕ್ಕೆ ಶಿವಕುಮಾರ್ ಅಡ್ಡಿಯಾಗಿದ್ದು, ಈ ಬೆಳವಣಿಗೆ ಸಹೋದರರ ನಡುವೆ ಜಟಾಪಟಿಗೆ ಕಾರಣವಾಗಿದೆ ಎನ್ನಲಾಗಿದೆ.
ಶಾಸಕ ಸಿ.ಪಿ.ಯೋಗೀಶ್ವರ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಚನ್ನಪಟ್ಟಣಕ್ಕೆ ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಸಂಸತ್ ಚುನಾವಣೆ ದೃಷ್ಟಿಯಿಂದ ಕ್ಷೇತ್ರವನ್ನು ಪಕ್ಷದ ತೆಕ್ಕೆಯಲ್ಲೇ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿರುವ ಸಂಸದ ಡಿ.ಕೆ.ಸುರೇಶ್ ತಮ್ಮ ಸಹೋದರಿಯ ಪತಿಯನ್ನೇ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ.
ಆದರೆ, ಸಹೋದರನ ಈ ಪ್ರಯತ್ನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿವಕುಮಾರ್ ಅಡ್ಡಿಯಾಗಿದ್ದು, ಈಗಾಗಲೇ ಸಂಬಂಧಿ ರವಿ ರಾಜಕಾರಣದಲ್ಲಿದ್ದಾರೆ. ಕುಟುಂಬದ ಮತ್ತೊಬ್ಬರನ್ನು ರಾಜಕಾರಣಕ್ಕೆ ಕರೆತರುವುದು ಬೇಡ ಎಂಬ ತೀರ್ಮಾನದಲ್ಲಿದ್ದಾರೆ. ಆದರೆ, ಈ ನಿರ್ಧಾರವನ್ನು ಒಪ್ಪದ ಸುರೇಶ್ ಅವರು ಶರಶ್ಚಂದ್ರ ಅವರನ್ನು ಕಣಕ್ಕಿಳಿಸಲೇಬೇಕು. ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುವುದಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
Comments are closed.