ಕರಾವಳಿ

ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಕುಂದಾಪುರ ಕಾಂಗ್ರೆಸ್!

Pinterest LinkedIn Tumblr

ಕುಂದಾಪುರ: ಅವಧಿಗೂ ಮೊದಲೇ ಕುಂದಾಪುರದ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಗುರುವಾರ ಮಧ್ಯಾಹ್ನ ಬೃಹತ್ ಪ್ರತಿಭಟನೆ ನಡೆಯಿತು. ಕುಂದಾಪುರ ಬ್ಲಾಕ್ ಕಾಂಗ್ರೆಸ್, ಕೋಟ ಬ್ಲಾಕ್ ಕಾಂಗ್ರೆಸ್, ಕುಂದಾಪುರ ಇಂಟಕ್ ಸಂಸ್ಥೆಗಳ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಈ ಸಂದರ್ಭ ಮಾತನಾಡಿ, ರಾಜ್ಯ ಸರಕಾರದಿಂದ ಬಜೆಟ್ ಮಂಡನೆಯಾಗುವ ಈ ಮಹತ್ವದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅಗತ್ಯದ ಅನುಧಾನವನ್ನು ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉತ್ತಮ ಅವಕಾಶಗಳಿದ್ದಾಗ್ಯೂ ಶಾಸಕ ಹಾಲಾಡಿ ಶ್ರೀವಾಸ ಶೆಟ್ಟಿಯವರು ಕ್ಷೇತ್ರದ ಶಾಸಕ ಸ್ಥಾನಕ್ಕೆ ಅವಧಿಗೆ ಮುಂಚಿತವಾಗಿ ರಾಜೀನಾಮೆ ನೀಡುವ ಮೂಲಕ ಕ್ಷೇತ್ರದ ಜನತೆಗೆ ವಿಶ್ವಾಸ ದ್ರೋಹ ಬಗೆದಿದ್ದಾರೆ, ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವೇಳೆ ಮತ್ತೊಮ್ಮೆ ಬಿಜೆಪಿಗೆ ಸೇರದೆ ಕ್ಷೇತ್ರವನ್ನು ಜಾತ್ಯಾತೀತವಾಗಿ ಪ್ರತಿನಿಧಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇದೀಗ ಮತ್ತೆ ಬಿಜೆಪಿ ಸೇರುವ ಕಾರಣಕ್ಕೆ ಮತ ನೀಡಿ ಚುನಾಯಿಸಿದ ಜನರನ್ನು ಕಡೆಗಣಿಸಿ ತನ್ನ ಸ್ವಾರ್ಥ ಸಾಧನೆಗಾಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇವರಿಗೆ ಮತ ನೀಡಿ ಚುನಾಯಿಸಿದ ಕ್ಷೇತ್ರದ ಸರ್ವ ಜಾತಿ, ಧರ್ಮಗಳ ಮತದಾರರಿಗೆ ಮೋಸ ಮಾಡಿದ್ದಾರೆಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರ ಹಲವು ಸಮಸ್ಯೆಗಳಿಂದ ಪೀಡಿತವಾಗಿದ್ದರೂ ಆ ಸಮಸ್ಯೆಗಳ ಪರಿಹಾರದ ಕುರಿತಾಗಿ ಯೋಚಿಸದೆ ಏಕಾ‌ಎಕಿ ವಿನಾಕಾರಣ ರಾಜೀನಾಮೆ ನೀಡಿರುವುದು ನೋವಿನ ವಿಚಾರವಾಗಿದೆ. ಮತ್ತು ಚುನಾಯಿತ ಪ್ರತಿನಿಧಿಯೊಬ್ಬರು ಇನ್ನೊಂದು ಪಕ್ಷ ಸೇರುವ ಸಲುವಾಗಿ ಮತ್ತುಈ ಹಿಂದೆ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ರಾಜಿನಾಮೆ ನೀಡಿದ್ದಾರೆ. ಈ ರೀತಿಯಾಗಿ ಪದೇ ಪದೇ ರಾಜೀನಾಮೆ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಕಾಪು, ಉಡುಪಿ ಹಾಗೂ ಬೈಂದೂರು ಕ್ಷೇತ್ರದಲ್ಲಿ ನಡೇದ ಅಭಿವ್ರದ್ದಿ ಕಾರ್ಯಗಳನ್ನು ನೋಡಿದರೆ ನಮಗೆ ಬೇಸರವಾಗುತ್ತದೆ. ಜನರೊಂದಿಗೆ ಬೆರೆಯದ, ಸರಕಾರದ ಶಿಷ್ಟಾಚಾರ ಪಾಲಿಸದ ಇಂತಹ ಶಾಸಕರ ಹೆಸರು ತಿಳಿಯದ ಅದೆಷ್ಟೋ ಮಂದಿ ಇದ್ದಾರೆ. ಇನ್ನೊಬ್ಬರನ್ನು ಮೈಮರೆಸಿ ತನ್ನ ಸ್ವಾರ್ಥ ಸಾಧಾನೆ ಮಾಡಿಕೊಳ್ಳುವ ವ್ಯಕ್ತಿ ಅವರು. ಇನ್ನು ಶೋಭಾ ಕರಂದ್ಲಾಜೆ ಮೋದಿಯವರ ನೆರೆಯಲ್ಲಿ ಕೊಚ್ಚಿಬಂದ ಕಸಕಡ್ಡಿಯ ರೀತಿ. ಅವರ ಅವಸ್ಥೆಯ ಬಗ್ಗೆ ಬಿಜೆಪಿಯ ನಾಯಕರೇ ಲೇವಡಿ ಮಾಡುತ್ತಿದ್ದಾರೆ. ಉಡುಪಿ ಚಿಕ್ಕಮಗಳೂರಿನ ಸಮಸ್ಯೆಯ ಬಗ್ಗೆ ಅವರಿಗೆ ಕೊಂಚವೂ ಆಲೋಚನೆಯಿಲ್ಲ. ಇದೆಲ್ಲಾ ಕಾರಣಗಳಿಂದ ಈಬಾರಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನಗರ ಯೋಜನಾ ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮುಖಂಡರಾದ ವಿನೋದ್ ಕ್ರಾಸ್ತಾ, ರೋಶನಿ ಒಲಿವೆರಾ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್, ಜ್ಯೋತಿ ಪುತ್ರನ್,ಇಚ್ಚಿತಾರ್ಥ್ ಶೆಟ್ಟಿ, ಹಿರಿಯಣ್ಣ ಬಿ, ಮಲ್ಲಿಕಾ ಬಾಲಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Comments are closed.