ತಮಿಳುನಾಡು: ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ಬಿಡುಗಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಯಶಸ್ಸಿನ ಪ್ರದರ್ಶನ ಕಾಣುತ್ತಿರುವುದು ತಿಳಿದಿರುವ ವಿಚಾರ, ಆದರೆ ತಮಿಳುನಾಡಿನ ಈರೋಡ್ನಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಕೆಲ ವ್ಯಕ್ತಿಗಳು ಪದ್ಮಾವತ್ ಚಿತ್ರ ಪ್ರದರ್ಶನ ನಡೆಯುತ್ತಿರುವ ಚಿತ್ರಮಂದಿರದ ಮುಂದೆ ಪ್ರತಿಭಟಿಸುವ ಬದಲು ತೆಲುಗಿನ ಭಾಗಮತಿ ಚಿತ್ರ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದಕ್ಷಿಣದ ಹೆಚ್ಚಿನ ರಾಜ್ಯಗಳಲ್ಲಿ ಹಿಂದಿ ಭಾಷೆಯ ಮೇಲೆ ಅತಿಯಾದ ಮೋಹವಿಲ್ಲದಿದ್ದರೂ, ಕೆಲ ದಿನಗಳಿಂದ ಪದ್ಮಾವತ್ ಚಿತ್ರದ ವಿರುದ್ಧ ಮಾತ್ರ ಎಲ್ಲೆಡೆ ಪ್ರತಿಭಟನೆ ನಡೆಸಿಕೊಂಡು ಬರಲಾಗಿತ್ತು. ಈ ಎಲ್ಲದರ ನಡುವೆಯೂ ಜ.25ರಂದು ಚಿತ್ರ ಬಿಡುಗಡೆಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವೆ ತಮಿಳುನಾಡಿನ ಈರೋಡ್ನಲ್ಲಿ ಕೆಲ ಪ್ರತಿಭಟನಾಕಾರರು ಪದ್ಮಾವತ್ ಚಿತ್ರದ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿ ಚಿತ್ರ ಮಂದಿರಕ್ಕೆ ದಾಳಿ ನಡೆಸಿದ್ದಾರೆ.
ಈ ವೇಳೆ ಚಿತ್ರ ಮಂದಿರುದಲ್ಲಿ ಅನುಷ್ಕಾ ನಟನೆಯ ತೆಲುಗಿನ ಭಾಗಮತಿ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಇದನ್ನರಿಯದ ಪ್ರತಿಭಟನಾಕಾರರು ಚಿತ್ರ ಮಂದಿರದಲ್ಲಿ ಪ್ರತಿಭಟನೆ ನಡೆಸಿ ಚಿತ್ರ ಪ್ರದರ್ಶನ ರದ್ದುಗೊಳಿಸುವಂತೆ ಮಾಡಿದ್ದಾರೆ ಎಂದು ಭಾರತೀಯ ನೌಕಾಪಡೆಯ ನಿವೃತ್ತ ಲೆಫ್ಟಿನೆಂಟ್ ಸಿಡಿಆರ್ ಗೋಕುಲ್ ಎಂಬವರು ಟ್ವೀಟ್ ಮಾಡಿದ್ದಾರೆ.
ಬನ್ಸಾಲಿಯ ಪದ್ಮಾವತ್ ತಮಿಳು, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಕೂಡಾ ಮಾಡಲಾಗಿದ್ದು, ತಮಿಳುನಾಡಿನಲ್ಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು.
Comments are closed.