ಕರಾವಳಿ

ಸ್ಕಿಲ್ ಗೇಮ್‌‌ ದಾಳಿ ಪ್ರಕರಣ : ಮೇಯರ್ ಕವಿತಾ ಸನಿಲ್‌ಗೆ ಹೈಕೋರ್ಟ್ ನೊಟೀಸ್ ಜಾರಿ

Pinterest LinkedIn Tumblr

ಮಂಗಳೂರು, ಫೆಬ್ರವರಿ 6: ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿದ್ದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಕಳೆದ ಬಾರಿ ಫಳ್ನೀರ್‌ನ ಸ್ಕಿಲ್ ಗೇಮ್‌‌ಗೆ ದಾಳಿ ನಡೆಸಿದ ಮೇಯರ್ ಕವಿತಾ ಸನಿಲ್ ವಿರುದ್ಧ ಮಾಲಕಿ ಸಜಿತಾ ರೈ ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಕವಿತಾ ಸನಿಲ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಹಾಗೂ ಪಾಂಡೇಶ್ವರ ಠಾಣೆಯ ವೃತ್ತ ನಿರೀಕ್ಷಕರಾದ ಕೆ.ಯು. ಬೆಳ್ಳಿಯಪ್ಪ ಅವರಿಗೆ ಕೋರ್ಟ್‌ ನೋಟೀಸು ಜಾರಿ ಮಾಡಿದೆ.

ಸ್ಕಿಲ್ಗೇಮ್ ಕೇಂದ್ರಗಳ ಮೇಲಿನ ದಾಳಿಗೆ ಸಂಬಂಧಿಸಿ ಸುಜಿತಾ ರೈ ಎಂಬವರು ವಕೀಲ ವಿನೋದ್ ಕುಮಾರ್ ಅವರ ಮೂಲಕ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಮೇಯರ್ ಕವಿತಾ ಸನಿಲ್ ಅವರು ದಾಳಿಯ ಸಂದರ್ಭ ಟ್ರೇಡ್ಲೈಸನ್ಸ್ ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಹೈಕೋರ್ಟ್ ನೀಡಿದ ತಡೆಯಾಜ್ಞೆ ದಾಖಲೆಗಳನ್ನು ತೋರಿಸಿದ್ದರೂ ಮನ್ನಣೆ ನೀಡಲಿಲ್ಲ. ದಾಳಿಯಿಂದ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸುಜಿತಾ ರೈ ಅವರು ಕೋರ್ಟ್ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಸ್ಕಿಲ್‌ಗೇಮ್‌ ಮೇಲೆ ನಡೆಸಿದ್ದ ದಾಳಿಯೇ ಅಕ್ರಮ ಎಂದು ಕೋರ್ಟ್‌ ಹೇಳಿದ್ದು, ಇದೀಗ ಮೇಯರ್ ಕವಿತಾ ಸನಿಲ್ ಅವರಿಗೆ ನೊಟೀಸ್ ಜಾರಿ ಮಾಡಿರುವ ಹೈಕೋರ್ಟ್ ಸ್ಕಿಲ್ ಗೇಮ್ ಸೆಂಟರ್ ವಿರುದ್ಧ ಇರುವ ಎಲ್ಲ ಕ್ರಮಗಳಿಗೆ ತಡೆಯಾಜ್ಞೆ ನೀಡಿದೆ.ಮಾತ್ರವಲ್ಲದೇ ಕವಿತಾ ಸನಿಲ್, ಮಂಜಯ್ಯ ಶೆಟ್ಟಿ ಹಾಗೂ ಬೆಳ್ಳಿಯಪ್ಪ ಅವರು ಸಜಿತಾ ರೈಯವರಿಗೆ ಸೂಕ್ತ ಪರಿಹಾರ ನೀಡಲು ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.

ಹಿರಿಯ ನ್ಯಾಯವಾದಿಗಳಾದ ಲಕ್ಷ್ಮೀನಾರಾಯಣ ಹಾಗೂ ವಿನೋದ್ ಕುಮಾರ್ ದೂರುದಾರರ ಪರವಾಗಿ ವಾದಿಸಿದ್ದರು.

Comments are closed.