ಮುಂಬೈ: ವಾಯುವ್ಯ ಆಫ್ರಿಕಾದ ಬೆನಿನ್ ನಲ್ಲಿ ಕಡಲ್ಗಳ್ಳರಿಂದ ಅಪಹರಣಗೊಂಡಿದ್ದ 22 ಭಾರತೀಯ ನಾವಿಕರು ಬಿಡುಗಡೆಯಾಗಿದ್ದಾರೆ. ನಾಲ್ಕು ದಿನಗಳ ನಂತರ ಎಲ್ಲಾ ನಾವಿಕರು ಸುರಕ್ಷಿತವಾಗಿ ಮರಳಿದ್ದಾರೆ.
ಎಲ್ಲಾ ನಾವಿಕರು ಹಾಗೂ ಅನಿಲ ಸಾಗಾಟದ ಹಡಗು ಮಾರೈನ್ ಎಕ್ಸ್ ಪ್ರೆಸ್ ವಾಪಾಸ್ಸಾಗಿದೆ ಎಂದು ಹಡಗುಯಾನದ ಮಹಾನಿರ್ದೇಶಕಿ ಮಾಲಿನಿ ಶಂಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಎಲ್ಲಾ ನಾವಿಕರು ಸುರಕ್ಷಿತವಾಗಿದ್ದು, ಮತ್ತೆ ನೌಕಾಯಾನಕ್ಕೆ ಹಡಗನ್ನು ನಿಯೋಜಿಸಲಾಗುವುದು ಆದರೆ, ಹಡಗಿನಲ್ಲಿದ್ದ ಸರಕಿನ ವಿಮೋಚನಾ ಮೌಲ್ಯ ಪಾವತಿ ಸಂಬಂಧ ಯಾವ ಮಾಹಿತಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.
ಅನಿಲ ಸಾಗಿಸುತ್ತಿದ್ದ ಮಾರೈನ್ ಎಕ್ಸ್ ಪ್ರೆಸ್ ಹಡಗನ್ನು ಫೆಬ್ರುವರಿ 1ರಂದು ಕಡಲ್ಗಳ್ಳರು ಅಪಹರಿಸಿದರಲ್ಲದೇ, ಎಲ್ಲಾ ಸಂಪರ್ಕ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದರು. ಈ ಹಡಗಿನಲ್ಲಿ 13 ಸಾವಿರ ಟನ್ ಸರಕನ್ನು ಸಾಗಿಸಲಾಗುತಿತ್ತು.
Comments are closed.