ಕ್ರೀಡೆ

ತಮಗೆ ಹೆಚ್ಚು ನೀಡಿ ಸಹಾಯಕ ಸಿಬ್ಬಂದಿಗೆ ಕಡಿಮೆ ಬಹುಮಾನ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ದ್ರಾವಿಡ್

Pinterest LinkedIn Tumblr

ಮುಂಬೈ: ನಾಲ್ಕನೇ ಬಾರಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಜಯಿಸಿದ ಭಾರತ ತಂಡಕ್ಕೆ ನೀಡಿದ ನಗದು ಬಹುಮಾನದಲ್ಲಿ ತಾರತಮ್ಯ ಎಸಗಿರುವ ಬಗ್ಗೆ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಬೇಸರ ವ್ಯಕ್ತ‍ಪಡಿಸಿದ್ದಾರೆ.

ವಿಜೇತ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ₹ 50 ಲಕ್ಷ, ಸಹಾಯಕ ಸಿಬ್ಬಂದಿಗೆ ₹ 20 ಲಕ್ಷ ಮತ್ತು ಆಟಗಾರರಿಗೆ ₹ 30 ಲಕ್ಷ ನಗದು ಬಹುಮಾನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿತ್ತು.

ಸಹಾಯಕ ಸಿಬ್ಬಂದಿಗೆ ಕಡಿಮೆ ನಗದು ಬಹುಮಾನ ನೀಡಿ ತಮಗೆ ಮಾತ್ರ ಹೆಚ್ಚು ಘೋಷಿಸಿದ್ದಕ್ಕೆ ದ್ರಾವಿಡ್ ಬೇಸರಗೊಂಡಿದ್ದಾರೆ. ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಬಹುಮಾನ ನೀಡಬೇಕು ಎಂದು ಅವರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವಕಪ್ ಗೆದ್ದಿರುವುದರ ಹಿಂದೆ ಎಲ್ಲ ಸಿಬ್ಬಂದಿಯ ಶ್ರಮವಿದೆ. ಎಲ್ಲರೂ ಒಂದು ತಂಡವಾಗಿ ದುಡಿದಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ ಎನ್ನಲಾಗಿದೆ.

ವಿಶ್ವಕಪ್ ಫೈನಲ್‌ನಲ್ಲಿ ಜಯಗಳಿಸಿ ನ್ಯೂಜಿಲೆಂಡ್‌ನಿಂದ ಸ್ವದೇಶಕ್ಕೆ ಮರಳಿದ ಸಂದರ್ಭ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲೂ ದ್ರಾವಿಡ್ ‘ಇದು ಸಾಂಘಿಕ ಜಯ. ತೆರೆಯ ಹಿಂದೆ ಕೆಲಸ ಮಾಡಿದ ಎಲ್ಲ ಸಿಬ್ಬಂದಿಗೂ ಇದರ ಶ್ರೇಯ ಸಲ್ಲಬೇಕು’ ಎಂದು ಹೇಳಿದ್ದರು.

Comments are closed.