ಕರಾವಳಿ

ಕುಂದಾಪುರವನ್ನೇ ತಲ್ಲಣಗೊಳಿಸಿದ ಭಿನ್ನ ಕೋಮುಗಳ ಲವ್ ಕೇಸಿನ ಭಾಸ್ಕರ್ ಕೊಠಾರಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಅಂತರ್ ಧರ್ಮೀಯ ಪ್ರೇಮ ಪ್ರಕರಣದ ಮೂಲಕ ಕುಂದಾಪುರದಲ್ಲಿ ಕೋಮು ದ್ವೇಷದ ಬೆಂಕಿ ಹತ್ತಲು ಕಾರಣವಾಗಿದ್ದ ‘ಭಾಸ್ಕರ್ ಕೊಠಾರಿ’ ಪ್ರಕರಣದ ರುವಾರಿ (ಪ್ರೇಮಿ) ಭಾಸ್ಕರ ಕೊಠಾರಿ(48) ತನ್ನ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಅಂಪಾರು ಮೂಡುಬಗೆಯಲ್ಲಿ ಈ ಘಟನೆ ನಡೆದಿದೆ.

ಯಾವುದೋ ಕಾರಣಕ್ಕೆ ತನ ಸಹೋದರ ಭಾಸ್ಕರ್ ಕೊಠಾರಿ ಮನೆ ಸಮೀಪದ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಥವಾ ನೀರು ಎತ್ತಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿರಬಹುದೆಂಬ ಬಗ್ಗೆ ಅವರ ಸಹೋದರ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲ ವರ್ಷಗಳಿಂದ ಮದ್ಯಪಾನಕ್ಕೆ ದಾಸರಾಗಿದ್ದ ಭಾಸ್ಕರ ಕೊಠಾರಿ ಕಳೆದ ಕೆಲವು ದಿನಗಳಿಂದ ಕುಡಿತ ನಿಲ್ಲಸಿದ್ದು ಇದರಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದೆ. ಮಂಗಳವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ಅವರು ಮನೆಯವರ ತೀವ್ರ ಹುಡುಕಾಟದ ಬಳಿಕ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 

90ರ ದಶಕದಲ್ಲಿ ಬೆಚ್ಚಿಬೀಳಿಸಿದ ‘ಕೊಠಾರಿ’ ಪ್ರಕರಣ….
ಸುಮಾರು ೨೫ ವರ್ಷಗಳ ಹಿಂದೆ ಅಂದರೆ 90ರ ದಶಕದಲ್ಲಿ ಭಾಸ್ಕರ್ ಕೊಠಾರಿ ಹಾಗೂ ಅನ್ಯಕೋಮಿನ ಯುವತಿ ಪ್ರೇಮ ಪ್ರಕರಣ ತುಂಬಾ ಸುದ್ದಿ ಮಾಡಿತ್ತು. ಗಾರೆ ಕೆಲಸ ನಿರ್ವಹಿಸುತ್ತಿದ್ದ ಭಾಸ್ಕರ ಕೊಠಾರಿ ಹಾಗೂ ಅವರ ಮನೆ ಸಮೀಪದ ಮುಸ್ಲಿಂ ಯುವತಿಯೋರ್ವಳ ನಡುವಿನ ಪ್ರೀತಿಗೆ ಯುವತಿ ಮನೆಯಲ್ಲಿ ವಿರೋಧವಿತ್ತು. ಈ ಪ್ರೇಮವನ್ನು ವಿರೋಧಿಸಿ ಭಾಸ್ಕರ ಕೊಠಾರಿಯನ್ನು ಅಪಹರಿಸಿ ಮರ್ಡರ್ ಮಾಡಿ ಮೂಟೆ ಕಟ್ಟಿ ಎಸೆಯಲಾಯಿತೆಂಬ ಒಂದೇ ಊಹಾಪೋಹಕ್ಕೆ ಕುಂದಾಪುರದಲ್ಲಿ ಕೋಮು ಗಲಭೆ ನಡೆದಿತ್ತು.

ಕಂಡಲ್ಲಿ ಗುಂಡು…..ಕರ್ಪ್ಯೂ..
90ರ ದಶಕದಲ್ಲಿ ನಡೆದ ಈ ಪ್ರಕರಣ ಕುಂದಾಪುರದಲ್ಲೇ ಮೊದಲ ಬಾರಿಗೆ ಕಂಡಲ್ಲಿ ಗುಂಡು ಆದೇಶಕ್ಕೆ ಕಾರಣವಾಗಿತ್ತು. ಕುಂದಾಪರದೆಲ್ಲೆಡೆ ಕರ್ಫ್ಯೂ ವಾತಾವರಣ ಜಾರಿಯಾಗಿತ್ತು. ಅಲ್ಲಲ್ಲಿ ಗುಂಪು ಘರ್ಷಣೆ, ಆಸ್ತಿಪಾಸ್ತಿ ಹನಿಯಂತಹ ಘಟನೆಗಳು ನಡೆದು ತಾಲೂಕು ಅಸ್ತವ್ಯಸ್ಥಗೊಂಡಿತ್ತು. ಕೊನೆಗೂ ಪೊಲೀಸರ ಕರ್ತವ್ಯ ಪ್ರಜ್ನೆಯಿಂದ ಭಾಸ್ಕರ ಕೊಠಾರಿಯನ್ನು ಶೀಘ್ರವೇ ಪತ್ತೆ ಹಚ್ಚಲಾಗಿತ್ತು.

ಕೊಠಾರಿಗೆ ವಿವಾಹ…
ಕುಂದಾಪುರದಲ್ಲಿ ಹಿಂದೂ ಸಂಪ್ರದಾಯದಂತೆ ಭಾಸ್ಕರ ಕೊಠಾರಿ ಹಾಗೂ ಅವರ ಪ್ರಿಯಕರೆಗೆ ವಿವಾಹ ಮಾಡಿಸಲಾಗಿತ್ತು. ವಿವಾಹದ ಬಳಿಕ ಆ ಯುವತಿಯ ಹೆಸರನ್ನು ಹಿಂದೂ ಹೆಸರಾಗಿ ಬದಲಾಯಿಸಲಾಗಿತ್ತು. ಇಬ್ಬರಿಗೂ ಆರು ವರ್ಷದ ಮಗಳಿದ್ದಾಳೆ. ಜೀವನ ನಿರ್ವಹಣೆಗೆ ಪತ್ನಿ ಬೀಡಿ ಕಟ್ಟಿ ಸಂಸಾರ ನಡೆಸುತ್ತಿದ್ದರು.

 

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.