ಗುಂಟೂರು: ಮನೆಯ ಮುಂದೆ ಎಮ್ಮೆ ಗಂಜಲ ಹಾಕಿತು ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಇಬ್ಬರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಗುಂಟೂರು ಜಿಲ್ಲೆಯ ಗುರುಜಾಲ ಮಂಡಲ ಬಳಿಯ ಜಂಗಮೇಶ್ವರಪುರಂನಲ್ಲಿ ಈ ಘಟನೆ ನಡೆದಿದೆ. ಪೊಲು ಚೆನ್ನಾ ರೆಡ್ಡಿ ಎಂಬ ವ್ಯಕ್ತಿಗೆ ಸೇರಿದ ಎಮ್ಮೆಯೊಂದು ಕೊಂಗಟಿ ನಾಗಿ ರೆಡ್ಡಿ ಎಂಬುವವರ ಮನೆಯ ಮುಂದೆ ಗಂಜಲ ಹಾಕಿದೆ. ಇದರಿಂದ ಕೋಪಗೊಂಡ ನಾಗಿ ರೆಡ್ಡಿ ಕತ್ತಿಯಿಂದ ಎಮ್ಮೆಯ ಕೆಚ್ಚಲು ಕತ್ತರಿಸಿ ಅಟ್ಟಹಾಸ ಮೆರೆದಿದ್ದಾನೆ ಎಂದು ಹೇಳಲಾಗುತ್ತಿದೆ.
ಕೃತ್ಯವನ್ನು ಕಣ್ಣಾರೆ ಕಂಡ ಚೆನ್ನಾ ರೆಡ್ಡಿ ಪತ್ನಿ ಸರೋಜಿನಮ್ಮ ತಮ್ಮ ಸಹೋದರನ್ನು ಕರೆದುಕೊಂಡು ನಾಗಿ ರೆಡ್ಡಿಯ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ವಾಗ್ವಾದ ನಡೆದು ಹೊಡೆದಾಟ ಸಂಭವಿಸಿದೆ.
ಈ ವೇಳೆ ನಾಗಿ ರೆಡ್ಡಿಯ ಕಡೆಯವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸರೋಜಮ್ಮನ ಸಹೋದರರಿಬ್ಬರನ್ನು ಕೊಲೆಗೈದಿದ್ದಾರೆ.
ಘಟನೆ ಸಂಬಂಧ ನಾಗಿ ರೆಡ್ಡಿ ಹಾಗೂ ಆತನ ಪುತ್ರ ವೀರ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Comments are closed.