ಕರ್ನಾಟಕ

ನಲಪಾಡ್ ಕೇಸ್: ಕೊಲೆ ಮಾಡುವ ಉದ್ದೇಶವಿರಲಿಲ್ಲ, ಕುಡಿದಾಗ ನಡೆದ ಗಲಾಟೆಯಷ್ಟೆ

Pinterest LinkedIn Tumblr


ಬೆಂಗಳೂರು: ಫರ್ಜಿ ಕೆಫೆಯಲ್ಲಿ ವಿದ್ವತ್‌ ಮೇಲೆ ನಡೆದ ಹಲ್ಲೆಯ ಹಿಂದೆ ಕೊಲೆ ಮಾಡುವ ಉದ್ದೇಶವೇ ಇರಲಿಲ್ಲ. ವಿಶೇಷ ಅಭಿಯೋಜಕರು ಸಿದ್ದಾಂತ, ಉತ್ಪ್ರೇಕ್ಷೆ, ಕಲ್ಪನೆಗಳಿಗಿಂತ ಸತ್ಯ ಮತ್ತು ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಬೇಕು ಎಂದು ಆರೋಪಿಗಳ ಪರ ವಕೀಲರಾದ ಬಾಲನ್‌ ನ್ಯಾಯಾಲಯಕ್ಕೆ ತಿಳಿಸಿದರು.

”63ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಬಾಲನ್‌ ವಾದ ಮಂಡಿಸಿದರು. ವಿಶೇಷ ಅಭಿಯೋಜಕರು ಸಲ್ಲಿಸಿರುವ ತಕರಾರಿಗೆ ದಾಖಲೆಗಳಿಲ್ಲ. ದಾಖಲೆಗಳಲ್ಲಿರುವುದು ತಕರಾರಿನಲ್ಲಿಲ್ಲ.ಸಿದ್ಧಾಂತಗಳಿಗಿಂತ ಸತ್ಯ ಮತ್ತು ದಾಖಲೆಗಳು ನ್ಯಾಯಾಲಯಕ್ಕೆ ಬೇಕು. ಮಾಧ್ಯಮಗಳ ಕಪೋಲಕಲ್ಪಿತ ಮತ್ತು ಅವಾಸ್ತವಿಕ ವಿಚಾರಣೆಯಂತೆ ನ್ಯಾಯಾಲಯದ ವಿಚಾರಣೆ ನಡೆಯುವುದಿಲ್ಲ,”ಎಂದರು.

ಮಾರಕಾಸ್ತ್ರ ಕೊಂಡೊಯ್ದಿಲ್ಲ :

”ಆರೋಪಿಗಳು ಕೊಲೆ ಮಾಡುವುದಕ್ಕಾಗಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಎಸ್‌ಪಿಪಿ ಹೇಳಿದ್ದಾರೆ. ಐಪಿಸಿ 307 ಅಡಿಯಲ್ಲಿ ಪ್ರಕರಣ ದಾಖಲಿಸುವಾಗ ಕೊಲೆಗೆ ಪ್ರೇರಣೆ, ಕೊಲೆಗೆ ತಯಾರಿಯೊಂದಿಗೆ ಹೋಗಿ ಕೊಲೆಗೆ ಯತ್ನಿಸಬೇಕು. ಈ ಘಟನೆಯಲ್ಲಿ ಕೊಲೆಗೆ ಪ್ರೇರಣೆ, ತಯಾರಿ ಇದ್ದ ಬಗ್ಗೆ ದೂರಿನಲ್ಲೂ ಹೇಳಿಲ್ಲ. ಎಫ್‌ಐಆರ್‌ನಲ್ಲೂ ಇಲ್ಲ. ಹೆಚ್ಚುವರಿ ಹೇಳಿಕೆಯಲ್ಲೂ ಇಲ್ಲ. ಅಲ್ಲದೆ ಬಿಯರ್‌ಬಾಟಲಿ ಮತ್ತು ಐಸ್‌ಜಗ್‌ನಿಂದ ಹಲ್ಲೆ ನಡೆದಿದ್ದು, ಇವು ಮಾರಕಾಸ್ತ್ರಗಳೇ ? ಅಷ್ಟಕ್ಕೂ ಇವನ್ನು ಆರೋಪಿಗಳು ಹೊರಗಿನಿಂದ ತೆಗೆದುಕೊಂಡು ಹೋಗಿದ್ದಲ್ಲ. ಬಾರ್‌ನಲ್ಲೇ ಇದ್ದವು. ಆ ಕ್ಷಣದ ಮಾತಿನ ಜಗಳದಿಂದ ನಡೆದ ಘಟನೆಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಅಕ್ರಮ ಕೂಟ ಕಟ್ಟಿಕೊಂಡು ಫರ್ಜಿ ಕೆಫೆಗೆ ಹೋಗಿದ್ದರು ಎಂದು ಹೇಳುವುದು, ಇದನ್ನು ಭಯೋತ್ಪಾದಕ ಕೃತ್ಯಕ್ಕೆ ಹೋಲಿಸುವುದು, ಹಿಟ್ಲರ್‌ ಮತ್ತು ನಾಸಿಸಂಗೆ ಆರೋಪಿಗಳನ್ನು ಹೋಲಿಸುವುದು ಉತ್ಪ್ರೇಕ್ಷೆಯ ಪರಮಾವಧಿ,” ಎಂದರು.

”ಘಟನೆ ಬಗ್ಗೆ ದೂರು ದಾಖಲಾಗಿದ್ದು ಫೆ.17ರ ರಾತ್ರಿ 11.30ಕ್ಕೆ. ಆರೋಪಿಗಳು ಆಸ್ಪತ್ರೆಗೂ ನುಗ್ಗಿ ಹಲ್ಲೆಗೆ ಯತ್ನಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಹಲ್ಲೆಗೆ ಒಳಗಾದ ವಿದ್ವತ್‌ ಆಸ್ಪತ್ರೆಗೆ ದಾಖಲಾಗಿದ್ದು 12.39ಕ್ಕೆ ಎಂದು ಆಸ್ಪತ್ರೆ ದಾಖಲೆಯೇ ಹೇಳುತ್ತಿದೆ ಎಂದು ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವಿದ್ವತ್‌ ಆಸ್ಪತ್ರೆಗೆ ದಾಖಲಾಗುವ ಒಂದು ಗಂಟೆ ಮೊದಲೇ ಆರೋಪಿಗಳು ಆಸ್ಪತ್ರೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದರೇ ? ಆ ರೀತಿ ಅಕ್ರಮವಾಗಿ ಆಸ್ಪತ್ರೆಗೆ ನುಗ್ಗಿದ್ದರೆ ಆಸ್ಪತ್ರೆ ಸಿಬ್ಬಂದಿ ಏಕೆ ದೂರು ದಾಖಲಿಸಿಲ್ಲ ,” ಎಂದು ಪ್ರಶ್ನಿಸಿದರು.

”ವಿದ್ವತ್‌ 8 ತಿಂಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕು ಎಂದು ಎಸ್‌ಪಿಪಿ ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದರು ? ಶೇ 90 ರಷ್ಟು ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಉಳಿದ ಶೇ 10 ರಷ್ಟು ಗುಣಮುಖರಾಗಲು 8 ತಿಂಗಳು ಬೇಕೇ ? ಎನ್ನುವ ಪ್ರಶ್ನೆಗಳ ಮೂಲಕ ಎಸ್‌ಪಿಪಿ ಅವರು ವಾಸ್ತವಕ್ಕಿಂತ ಹೆಚ್ಚಾಗಿ ಉತ್ಪ್ರೇಕ್ಷೆಯನ್ನೇ ಹೇಳಿದ್ದಾರೆ,” ಎಂದು ವಿವರಿಸಿದರು.

ಹಾಲು ಕೊಡಿಯಲು ಬಾರ್‌ಗೆ ಹೋಗಿದ್ದರೆ ?

”ಇದೇ ಘಟನೆಯಲ್ಲಿ ಆರೋಪಿ ಎ2 ದಾಖಲಿಸಿರುವ ದೂರಿನ ಬಗ್ಗೆ ಎಸ್‌ಪಿಪಿ ಹೇಳುತ್ತಿಲ್ಲ, ಅದರಲ್ಲಿ ವಿದ್ವತ್‌ ಮದ್ಯಪಾನ ಮಾಡಿದ್ದ ಎಂದು ಹೇಳಲಾಗಿದೆ. ಎಸ್‌ಪಿಪಿ ಅವರ ಪ್ರಕಾರ ವಿದ್ವತ್‌ ಆಲ್ಕೋಹಾಲ್‌ ಸೇವಿಸಿರಲಿಲ್ಲ. ಹಾಗಾದರೆ, ಹಾಲು ಕುಡಿಯಲು ಬಾರ್‌ಗೆ ಹೋಗಿದ್ದರೇ,” ಎಂದು ಪ್ರಶ್ನಿಸಿದರು.

ನಕಲ್‌ ಎಲ್ಲಿಂದ ಬಂತು ?

ದೂರಿನಲ್ಲಾಗಲೀ, ಎಫ್‌ಐಆರ್‌ನಲ್ಲಾಗಲೀ, ಸ್ಥಳ ಪಂಚನಾಮೆಯಲ್ಲಾಗಲೀ, ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಾಗಲೀ ಎಲ್ಲೂ ನಕಲ್‌ನ ಪ್ರಸ್ತಾಪ ಇಲ್ಲ. ಮಾಧ್ಯಮಗಳಲ್ಲಿ ಮತ್ತು ಎಸ್‌ಪಿಪಿ ಹೇಳಿಕೆಯಲ್ಲಿದೆ. ನಕಲ್‌ ಬಳಸಿದ್ದರು ಎನ್ನುವುದಕ್ಕೆ ದಾಖಲೆ, ಪುರಾವೆ ಏನಿದೆ ? ಇದು ಎಲ್ಲಿಂದ ಬಂತು ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ತಿಳಿಸಬೇಕು. ಮಾಫಿಯಾ, ಭಯೋತ್ಪಾದನೆ ಎಂದೂ ಹೇಳಿದ್ದೀರಿ-ಇವರಲ್ಲಿ ಯಾರು ಭಯೋತ್ಪಾದಕರು ? ಭಯೋತ್ಪಾದನಾ ಸಂಘಟನೆ ಯಾವುದು ? ಆರೋಪಿಗಳ ವಿರುದ್ಧ ಈ ಹಿಂದೆ ಒಂದೂ ಕೇಸು ದಾಖಲಾಗಿಲ್ಲ. ದೂರಿನಲ್ಲಾಗಲೀ, ಎಫ್‌ಐಆರ್‌ನಲ್ಲಾಗಲೀ ಎ2 ನಿಂದ ಎ8 ವರೆಗಿನ ಆರೋಪಿಗಳ ಹೆಸರೇ ಇಲ್ಲ. ಹಲ್ಲೆಗೆ ಒಳಗಾದ ವಿದ್ವತ್‌ನ ಹೇಳಿಕೆಯನ್ನೂ ಪಡೆದಿಲ್ಲ. ಆದರೂ ಯಾವ ಆಧಾರದ ಮೇಲೆ ಅವರನ್ನು ಬಂಧಿಸಿದಿರಿ,” ಎಂದು ಪ್ರಶ್ನಿಸಿದರು. ”ಸಿಸಿಟಿವಿ ದೃಶ್ಯಗಳನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳಹಿಸದೆ ನಂಬುವಂತಿಲ್ಲ,” ಎಂದರು.

ಆರೋಪಿ ಪರ ಮತ್ತೊರ್ವ ವಕೀಲರಾದ ಟಾಮಿ ಸೆಬಾಸ್ಟಿನ್‌ ಅವರು, ”ಹಲ್ಲೆಗೊಳಗಾದ ವಿದ್ವತ್‌ ಬಗ್ಗೆ ಆಸ್ಪತ್ರೆ ದಾಖಲೆಗಳು ಹೇಳುತ್ತಿರುವುದೇ ಬೇರೆ. ಎಸ್‌ಪಿಪಿ ನ್ಯಾಯಾಲಯಕ್ಕೆ ಹೇಳುತ್ತಿರುವುದೇ ಬೇರೆ,”ಎಂದು ತಮ್ಮ ಬಳಿ ಇದ್ದ ಆಸ್ಪತ್ರೆಯ ದಾಖಲೆಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದರು.

ಕೊನೆಯಲ್ಲಿ ಮತ್ತೆ ವಾದಕ್ಕೆ ಇಳಿದ ಎಸ್‌ಪಿಪಿ ಶ್ಯಾಂಸುಂದರ್‌, ”ಮೊದಲ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಾದ ನಂತರ ಎರಡನೇ ದೂರು ದಾಖಲಾಗಿದೆ. ಹಲ್ಲೆ ಮಾಡಿ ಮನೆಗೆ ಹೋದವನು, ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದರೆ ತೊಂದರೆ ಆಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದ 2ನೇ ದೂರು ದಾಖಲಿಸಿದ್ದಾನೆ. ಈ ದೂರು ಬರೆದಿರುವ ಹಸ್ತಾಕ್ಷರ, ಸಹಿ, ದಿನಾಂಕ ಎಲ್ಲವೂ ತಿದ್ದಿದಂತಿವೆ. ಪೊಲೀಸರೇ ಈ ದೂರನ್ನು ಬರೆದುಕೊಂಡಿರಬೇಕು. ಎರಡನೇ ದೂರು ಕೊಡಲು ಬಂದಾಗಲೇ ಆರೋಪಿಯನ್ನು ಏಕೆ ಬಂಧಿಸಲಿಲ್ಲ. ಬಂಧಿಸದೆ ಬಿಟ್ಟು ಕಳುಹಿಸಿ ನಂತರ ಶರಣಾಗತಿ ಮಾಡಿಸಿಕೊಂಡಿದ್ದಾರೆ. ಆದ್ದರಿಂದ ನಿರ್ಭಯಾ ಘಟನೆಯಂತೆ ಸಾಮಾನ್ಯ ಜನರು ಓಡಾಡುವುದಕ್ಕೂ ಹೆದರುವಂತಹ ಸ್ಥಿತಿ ಈ ಪ್ರಕರಣ ನಿರ್ಮಿಸಿದೆ,” ಎಂದು ನಿರ್ಭಯಾ ತೀರ್ಪಿನ ಸಾಲುಗಳನ್ನು ಓದಿ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ವಿನಂತಿಸಿ ವಾದ ಮುಗಿಸಿದರು.

ಎರಡೂ ಕಡೆಯ ವಾದ ವಿವಾದ ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ತೀರ್ಪನ್ನು ಮಾ.2ಕ್ಕೆ ಮುಂದೂಡಿತು.

74 ಮಂದಿ ಸತ್ತಾಗ ಎಸ್‌ಪಿಪಿ ಏಕಿಲ್ಲ ?

”ಈ ಘಟನೆ ರಾಜಕೀಯ ಉದ್ದೇಶದಿಂದ ದೊಡ್ಡ ಪ್ರಚಾರ ಪಡೆದಿದೆ. ಬೆಂಗಳೂರಿನಲ್ಲಿ ಕಳೆದ 3 ವರ್ಷಗಳಲ್ಲಿ 74 ಮಂದಿ ದಲಿತರು ಮ್ಯಾನ್‌ಹೋಲ್‌ನಲ್ಲಿ ಸತ್ತಿದ್ದಾರೆ. ಆಗ ಇಲ್ಲದ ಪ್ರಚಾರ ಈ ಪ್ರಕರಣಕ್ಕೆ ಸಿಕ್ಕಿದೆ. 74 ಮಂದಿ ಸತ್ತಾಗ ಯಾವ ಪ್ರಕರಣದಲ್ಲೂ ವಿಶೇಷ ಅಭಿಯೋಜಕರನ್ನು ನೇಮಿಸದ ಸರಕಾರ ಈ ಪ್ರಕರಣದಲ್ಲಿ ಮಾತ್ರ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ಎಸ್‌ಪಿಪಿ ನೇಮಿಸಿದೆ. ಇದು ದೇಶಾದ್ಯಂತ ಆತಂಕ ಸೃಷ್ಟಿಸಿರುವ, ಬೆಂಗಳೂರಿನಲ್ಲಿ ಯಾರೂ ಓಡಾಡುವುದಕ್ಕೇ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಮಾಡಿರುವ ಪ್ರಕರಣ ಎನ್ನುವುದೆಲ್ಲ ಅತಿಕಾಲ್ಪನಿಕ,” ಎಂದು ಬಾಲನ್‌ ಬೇಸರ ವ್ಯಕ್ತಪಡಿಸಿದರು.

ಬರೀ ಸತ್ಯ ಗೆಲ್ಲಬೇಕು

ಎಸ್‌ಪಿಪಿ ಆದವರ ಜವಾಬ್ದಾರಿ ಏನು ಎನ್ನುವುದನ್ನೂ ನ್ಯಾಯಾಲಯಕ್ಕೆ ಬಾಲನ್‌ ಅವರು ಮನವರಿಕೆ ಮಾಡಿಕೊಟ್ಟರು.

ಹೈಕೋರ್ಟ್‌ ನ್ಯಾಯಮೂರ್ತಿ ಎಸ್‌.ಕುಮಾರ್‌ ಮತ್ತು ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಪ್ರಸ್ತಾಪಿಸಿದ ಅವರು, ”ಎಸ್‌ಪಿಪಿ ಆದವರು ಸತ್ಯವನ್ನು ಗೆಲ್ಲಿಸಬೇಕು. ದಾಖಲೆಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ನೆರವಾಗಬೇಕೇ ಹೊರತು ಕಾಲ್ಪನಿಕ ಸಂಗತಿಗಳಿಂದಲ್ಲ,” ಎನ್ನುವುದನ್ನು ಹೇಳಿದರು.

ಒಂದೆರಡು ದಿನದಲ್ಲಿ ವಿದ್ವತ್‌ ಡಿಸ್ಚಾರ್ಜ್‌

” ವಿದ್ವತ್‌ ಬಹುತೇಕ ಗುಣಮುಖರಾಗಿದ್ದು ಒಂದೆರಡು ದಿನದಲ್ಲಿ ಡಿಸ್ಚಾರ್ಜ್‌ ಆಗಬಹುದು. ನಮ್ಮ ನಿರೀಕ್ಷೆ ಮೀರಿ ವೇಗವಾಗಿ ವಿದ್ವತ್‌ ಚೇತರಿಸಿಕೊಂಡಿದ್ದಾರೆ. ಸದ್ಯ ನೋವು ನಿವಾರಕ ಮಾತ್ರೆಗಳನ್ನು ನೀಡಿದ್ದೇವೆ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಒಂದೆರಡು ದಿನದಲ್ಲಿ ಡಿಸ್ಚಾರ್ಜ್‌ ಮಾಡಬಹುದು ಎನ್ನುವುದನ್ನೂ ಕುಟುಂಬದವರಿಗೆ ಹೇಳಿದ್ದೇವೆ,” ಎಂದು ವಿದ್ವತ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಆನಂದ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ನಡುವೆ ಮಂಗಳವಾರ ಬೆಳಗ್ಗೆ ವಿದ್ವತ್‌ ಹೇಳಿಕೆ ದಾಖಲಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದ ಸಿಸಿಬಿ ತಂಡ ವೈದ್ಯರು ಅನುಮತಿ ನೀಡದ ಕಾರಣದಿಂದ ಬರಿಗೈಲಿ ವಾಪಸಾಗಿದೆ.

Comments are closed.