ಕರಾವಳಿ

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಆರಂಭ : ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತ ತೀವ್ರ ಕಟ್ಟೆಚ್ಚರ

Pinterest LinkedIn Tumblr

ಮಂಗಳೂರು, ಮಾರ್ಚ್.1: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಇಂದಿನಿಂದ ಆರಂಭಗೊಂಡಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಈಗಾಗಲೇ ಪ್ರಶ್ನೆಪತ್ರಿಕೆಗಳು ಬಯಲಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷ ಪೊಲೀಸ್ ಭದ್ರತೆಯನ್ನು ಕೂಡ ಪಡೆಯಲಾಗಿದೆ. ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜೆರಾಕ್ಸ್ ಅಂಗಡಿಗಳು, ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡಲಾಗಿದೆ.

ಮೊದಲ ದಿನವಾದ ಇಂದು ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆ ಆರಂಭಗೊಂಡಿದೆ. ರಾಜ್ಯಾದ್ಯಂತ ಒಟ್ಟು 6,90,150 ವಿದ್ಯಾರ್ಥಿಗಳು ಈ ಸಲ ದ್ವಿತೀಯ ಪಿಯು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದಲ್ಲದೆ 1,22,346 ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ (ಪುನರಾವರ್ತನೆ) ಬರೆಯುತ್ತಿದ್ದಾರೆ. ಮತ್ತೆ 28,374 ಖಾಸಗಿಯಾಗಿ ಕೂಡ ಪರೀಕ್ಷೆ ತೆಗೆದು ಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ 1004 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು , ಎಲ್ಲೆಡೆ ಈಗಾಗಲೇ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಒಟ್ಟು 38 ವಿಷಯಗಳಲ್ಲಿ ಪರೀಕ್ಷೆ ಬರೆಯಲಿದ್ದು , ಮೊದಲ ಬಾರಿಗೆ ಎನ್‍ಎಸ್‍ಕ್ಯೂಎಫ್‍ನ ವಿಷಯವೂ ಸೇರಿದೆ.

ದ.ಕ. ಜಿಲ್ಲೆಯಲ್ಲಿ 19,567 ವಿದ್ಯಾರ್ಥಿಗಳು, 19,066 ವಿದ್ಯಾರ್ಥಿನಿಯರ ಸಹಿತ ಒಟ್ಟು 38,633 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರೆ, ಉಡುಪಿ ಜಿಲ್ಲೆಯಲ್ಲಿ 7,817 ಬಾಲಕರು, 8,257 ಬಾಲಕಿಯರ ಸಹಿತ ಒಟ್ಟು 16,074 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

Comments are closed.