ಕರಾವಳಿ

ಮಂಗಳೂರು: ನಕಲಿ ಅಂಕಪಟ್ಟಿ ಜಾಲ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು,ಮಾರ್ಚ್.19: ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ನಕಲಿ ಅಂಕಪಟ್ಟಿ ಜಾಲ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ತೊಕ್ಕೊಟ್ಟು ಟಿಸಿ ರಸ್ತೆಯಲ್ಲಿರುವ ಮ್ಯಾಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈಯನ್ಸ್ (ಎಂಐಟಿಎಸ್) ಎಂಬ ಹೆಸರಿನ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಅಸ್ಕಾನ್ ಶೇಖ್ (25) ಮತ್ತು ಅಸ್ರಾರುದ್ದೀನ್ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇದೀಗ  ಬಂಧಿತರ ಸಂಖ್ಯೆ ಮೂರಕ್ಕೇರಿದೆ.

ಇತ್ತೀಚೆಗೆ ಮಂಗಳೂರು ನಗರ ತೊಕ್ಕೊಟ್ಟು ಟಿ ಸಿ ರಸ್ತೆಯಲ್ಲಿರುವ ಮ್ಯಾಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈಯನ್ಸ್ (ಎಂಐಟಿಎಸ್) ಎಂಬ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿಯನ್ನು ತಯಾರಿಸಿ ರೂ. 10,000 ರಿಂದ 45,000 ಹಣಕ್ಕೆ ನಕಲಿ ಅಂಕಪಟ್ಟಿ ಹಾಗೂ ಸರ್ಟ್ ಫೀಕೇಟ್ ಗಳನ್ನು ತಯಾರಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಈ ಪ್ರಕರಣದಲ್ಲಿ ಭಾಗಿಯಾದ ತೊಕ್ಕೊಟ್ಟು ನಿವಾಸಿ ಗೋಡ್ವಿನ್ ಡಿ ಸೋಜಾ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದವರ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಅಸ್ಕಾನ್ ಶೇಖ್ (25) ಮತ್ತು ಅಸ್ರಾರುದ್ದೀನ್ (26) ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿ ಅಸ್ಕಾನ್ ಶೇಖ್ ಈ ಸಂಸ್ಥೆಯನ್ನು ನಡೆಸುತ್ತಿದ್ದು, ಈತನು 2016 ನೇ ಇಸವಿಯಿಂದ ಸಂಸ್ಥೆಯನ್ನು ನಡೆಸುತ್ತಲೇ ಎಸ್‌ಎಸ್‌ಎಲ್ ಸಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಹೀಗೆ ವಿವಿಧ ಪದವಿಯ ನಕಲಿ ಅಂಕಪಟ್ಟಿಗಳನ್ನು ತಯಾರಿಸುತ್ತಾ ರೂ. 10,000 ದಿಂದ ರೂ. 45,000 ಮೊತ್ತಕ್ಕೆ ಮಾರಾಟ ಮಾಡುತ್ತಿದ್ದನು. ಆರೋಪಿಗಳಿಂದ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಅಸ್ಕಾನ್ ಶೇಖ್ ಎಂಬಾತನ ವಿರುದ್ಧ ಈ ಹಿಂದೆ 2016 ನೇ ಇಸವಿಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ಬಳಿ ಇದೇ ರೀತಿ ನಕಲಿ ಅಂಕಪಟ್ಟಿಗಳನ್ನು ತಯಾರಿಸುವ ಕೃತ್ಯವನ್ನು ನಡೆಸುತ್ತಿದ್ದ ಸಮಯ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ್, ಪಿಎಸ್‌ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.