ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿ ಜನಾಶೀರ್ವಾದ ಯಾತ್ರೆ ನಡೆಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.20 ಮತ್ತು 21 ರಂದು ಕರಾವಳಿ ಜಿಲ್ಲೆಗಳಲ್ಲಿ ಮೂರನೇ ಹಂತದ ಯಾತ್ರೆ ಕೈಗೊಳ್ಳಲಿದ್ದಾರೆ.
ಕರಾವಳಿಯಲ್ಲಿ ಮೂರೂ ಧರ್ಮಗಳು ಪ್ರಬಲವಾಗಿರುವುದರಿಂದ, ಈ ಬಾರಿ ದೇಗುಲ, ಚರ್ಚ್ ಹಾಗೂ ದರ್ಗಾಗಳಿಗೆ ರಾಹುಲ್ ತೆರಳಲಿದ್ದಾರೆ. ಅಲ್ಲದೆ, ಶೃಂಗೇರಿ ಮಠಕ್ಕೆ ತೆರಳಿ ಶಾರದಾಂಬೆ ದರ್ಶನ ಮಾಡಲಿದ್ದಾರೆ. ಆದರೆ ಉಡುಪಿ ಕೃಷ್ಣ ಮಠಕ್ಕೆ ತೆರಳುವ ಕಾರ್ಯಕ್ರಮವಿಲ್ಲ.
ಮಾ.20 ರಂದು ಪೂರ್ವಾಹ್ನ 11.15 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಪರಾಹ್ನ 12.55 ಕ್ಕೆ ತೆಂಕ ಎರ್ಮಾಳುವಿನಲ್ಲಿ ರಾಜೀವ್ ಗಾಂಧಿ ರಾಜಕೀಯ ಸಂಸ್ಥೆ ಉದ್ಘಾಟನೆ ಮಾಡಿ, ಸೇವಾದಳ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 1.45 ರಿಂದ 2.20ರ ವರೆಗೆ ಉಡುಪಿ ಜಿಲ್ಲೆಯ ಪಡು ಬಿದ್ರೆಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಸಂಜೆ 4.20ಕ್ಕೆ ಸುರತ್ಕಲ್ನಲ್ಲಿ ಸಭಿಕರ ನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಂಜೆ 5.20 ರಿಂದ 6 ಗಂಟೆವರೆಗೆ ಮಂಗಳೂರಿನ ಜ್ಯೋತಿ ಸರ್ಕಲ್ನಿಂದ ಸಿಗ್ನಲ್ ಪಾಯಿಂಟ್ ಸರ್ಕಲ್ವರೆಗೆ ರೋಡ್ ಶೋ ನಡೆಸಲಿದ್ದಾರೆ.
ಸಂಜೆ 6ಕ್ಕೆ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವ ಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಕುದ್ರೋಳಿ ದೇವಸ್ಥಾನ, ರೋಜಾರಿಯೋ ಚರ್ಚ್ ಹಾಗೂ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಮಾ.21 ರಂದು ಬೆಳಿಗ್ಗೆ 8.30ಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.
ಪೂರ್ವಾಹ್ನ 11.20 ಕ್ಕೆ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ 12.25 ರಿಂದ 1.10 ರ ವರೆಗೆ ಶೃಂಗೇರಿ ಮಠದ ರಾಜೀವ್ ಗಾಂಧಿ ಸಂಸ್ಕೃತ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಅಪರಾಹ್ನ 3ಕ್ಕೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 4.40 ರಿಂದ 5 ಗಂಟೆ ವರೆಗೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಸಂಜೆ 6ಕ್ಕೆ ಸಾರ್ವ ಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
-ಉದಯವಾಣಿ
Comments are closed.