ಮಂಗಳೂರು, ಮಾರ್ಚ್ 19: ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಅವರು ಇದೇ ಮೊದಲ ಬಾರಿಗೆ ರಾಜ್ಯದ ಕರಾವಳಿಗೆ ಭೇಟಿ ನೀಡುತ್ತಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆಗಮಿಸುತ್ತಿ ರುವ ರಾಹುಲ್ ಗಾಂಧಿ ಅವರ ಸ್ವಾಗತಕ್ಕೆ ಪಕ್ಷದ ವತಿಯಿಂದ ಭರ್ಜರಿ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಸೋಮವಾರ ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ. 20ರಂದು 11:30ಕ್ಕೆ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಉಡುಪಿಯ ಕಾಪುವಿನಲ್ಲಿ ನಡೆಯುವ ಸೇವಾದಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ. 3.30ಕ್ಕೆ ಮುಲ್ಕಿ ಮತ್ತು 4:20ಕ್ಕೆ ಸುರತ್ಕಲ್‌ನಲ್ಲಿ ಜನಾಶೀರ್ವಾದ ಯಾತ್ರೆ ಮುಂದುವರಿಸಲಿದ್ದಾರೆ ಎಂದರು.
ಸಂಜೆ 5.20ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ರೋಡ್ ಶೋ ನಡೆಸಿ, ಬಳಿಕ ಸಂಜೆ ೬ಕ್ಕೆ ನೆಹರೂ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಚುನಾವಣಾ ಪೂರ್ವ ರಾಹುಲ್ ಭೇಟಿ ಇದಾಗಿದ್ದು, ನೆಹರು ಮೈದಾನದಲ್ಲಿ ಉತ್ತರ ದಿಕ್ಕಿಗೆ ಹಾಕಲಾದ ವೇದಿಕೆಯಲ್ಲಿ ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿಂದೆ ಇದೇ ರೀತಿ ರಾಹುಲ್ ಅಜ್ಜಿ ಇಂದಿಗಾ ಗಾಂಧಿ ಮಾತನಾಡಿದ್ದರು. ಆಗ ಜನರಿಂದ ಅಭೂತ ಪೂರ್ವ ಬೆಂಬಲ ದೊರೆತಿತ್ತು ಎಂದರು.
ದೇವಸ್ಥಾನ,ದರ್ಗಾ,ಚರ್ಚ್‌ಗೆ ಭೇಟಿ :
ಮಂಗಳೂರಿನ ಸಾರ್ವಜನಿಕ ಸಭಾ ಕಾರ್ಯಕ್ರಮದ ಬಳಿಕ ರಾಹುಲ್ ಗಾಂಧಿಯವರು ನಗರದ ರೊಝಾರಿಯೋ ಚರ್ಚ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಲಿರುವ ರಾಹುಲ್ ಗಾಂಧಿ ಮರುದಿನ ಬೆಳಗ್ಗೆ ಶೃಂಗೇರಿಗೆ ತೆರಳಲಿದ್ದಾರೆ ಎಂದು ರೈ ವಿವರ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಚಿವ ಯು.ಟಿ.ಖಾದರ್ ಪೂರಕ ಮಾಹಿತಿ ನೀಡಿದರು.
ಕರಾವಳಿಗೆ ರಾಗಾ ಆಗಮನ ಹಿನ್ನೆಲೆ : ಪಕ್ಷದಲ್ಲಿ ಹೊಸ ಸಂಚಲನ ಸೃಷ್ಠಿ
ರಾಜ್ಯ ಕರಾವಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವುದು ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿಯ ಬಳಿಕ ಇನ್ನೇನಿದ್ದರೂ ಕರಾವಳಿಯಲ್ಲಿ ರಾಗಾ ಹವಾ ಸೃಷ್ಟಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಗಾ ಭೇಟಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಒಂದಾದ ಮೇಲೊಂದು ಸಭೆ ನಡೆಯುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ರಾಹುಲ್ ಗಾಂಧಿ ಭೇಟಿ ವೇದಿಕೆಯಾಗಲಿದೆ.
ರಾಹುಲ್ ಸ್ವಾಗತಕ್ಕೆ ಮಂಗಳೂರಿನಲ್ಲಿ ಕಾಂಗ್ರೆಸ್ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮಂಗಳೂರಿನಲ್ಲಿ ಎಲ್ಲೆಡೆ ಬ್ಯಾನರ್ ಕಟೌಟ್‌ಗಳು ರಾರಾಜಿಸುತ್ತಿವೆ. ನಗರದ ಪ್ರಮುಖ ಸ್ಥಳಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರುವ ಬ್ಯಾನರ್ ಕಟೌಟ್‌ಗಳನ್ನು ಹಾಕಲಾಗಿದೆ.
ರಾಹುಲ್ ಭೇಟಿಯನ್ನು ಯಶಸ್ವಿಗೊಳಿಸಲು ಕಾಂಗ್ರೆಸ್ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಮುಸ್ಲಿಂ ನಾಯಕರೂ ರಾಗಾ ಭೇಟಿ ಯಶಸ್ವಿಗೊಳಿಸಲು ನಿರ್ಧರಿಸಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮತ್ತು ನೆಹರೂ ಮೈದಾನದಲ್ಲಿ ನಡೆಯಲಿರುವ ಬಹಿರಂಗ ಸಭೆಯ ಮೂಲಕ ಹೊಸ ಸಂದೇಶ ರವಾನಿಸಲು ಮುಸ್ಲಿಮ್ ನಾಯಕರು ಪಣತೊಟ್ಟಿದ್ದಾರೆ ಎಂದು ಹೇಳಲಾಗಿದೆ.
Comments are closed.