ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಪಂದ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆಯ ಮತದಾನ ಮೇ 12ರಂದು ನಡೆಯಲಿದ್ದು ಮತ ಎಣಿಕೆ 15ರಂದು ನಡೆಯಲಿದೆ. ಚುನಾವಣೆ ಪ್ರಚಾರ, ಮತದಾನ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಭದ್ರತೆ ಸಮಸ್ಯೆ ಎದುರಾಗದಂತೆ ಪಂದ್ಯಗಳ ದಿನಾಂಕವನ್ನು ಬದಲಾಯಿಸುವ ಸಾಧ್ಯತೆ ಇದೆ.
ಚುನಾವಣೆಯ ದಿನಾಂಕ ಪ್ರಕಟ ಗೊಂಡ ತಕ್ಷಣ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಈ ಕುರಿತು ಚಿಂತನೆ ನಡೆಸಿದ್ದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದೆ. ಬಿಸಿಸಿಐ ಈ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಎಸ್ಸಿಎ ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ‘ಬಿಸಿಸಿಐಗೆ ಮಧ್ಯಾಹ್ನವೇ ಮಾಹಿತಿ ನೀಡಲಾಗಿದೆ. ಐಪಿಎಲ್ ಆಡಳಿತ ಸಮಿತಿಯಲ್ಲಿ ಚರ್ಚೆ ನಡೆದ ನಂತರ ಈ ಕುರಿತು ಸೂಕ್ತ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ’ ಎಂದರು.
‘ಚುನಾವಣೆ ನಡೆಯುವ ಕಾರಣ ಬೆಂಗಳೂರಿನ ಪಂದ್ಯಗಳ ದಿನಾಂಕಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿಯ ಪಂದ್ಯಗಳ ದಿನಾಂಕ ಬದಲಾವಣೆ ಆಗುವ ಸಾಧ್ಯತೆ ಇದೆ. ಆದರೆ ಬೆಂಗಳೂರಿನಿಂದ ಪಂದ್ಯಗಳೇ ಸ್ಥಳಾಂತರಗೊಳ್ಳಲಾರವು’ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
ಮುಂಬೈ ಇಂಡಿಯನ್ಸ್ ಅಭ್ಯಾಸ
ಮುಂಬೈ (ಪಿಟಿಐ): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಭಾರತದ ಆಟಗಾರರು ಐಪಿಎಲ್ 11ನೇ ಆವೃತ್ತಿಗೆ ಅಭ್ಯಾಸ ಆರಂಭಿಸಿದ್ದಾರೆ. ವಿದೇಶಿ ಆಟಗಾರರು ಏಪ್ರಿಲ್ ಒಂದರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.
ನವಿ ಮುಂಬೈನ ಘನ್ಸೋಲಿಯಲ್ಲಿರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ನಲ್ಲಿ ಎರಡು ದಿನಗಳಿಂದ ತಂಡ ಅಭ್ಯಾಸ ಮಾಡುತ್ತಿದೆ ಎಂದು ತಿಳಿದು ಬಂದಿದ್ದು ಇದೇ 31ರಿಂದ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ.
Comments are closed.