ಕರಾವಳಿ

ಮಚೇಂದ್ರನಾಥ್ ಪಾಂಡೇಶ್ವರ ಸಂಸ್ಮರಣೆ ಕಾರ್ಯಕ್ರಮ / ರಾತ್ರಿ ಶಾಲೆಯ ಮೂಲಕ ಶಿಕ್ಷಣ ಕ್ರಾಂತಿ : ಮಲ್ಲೂರು

Pinterest LinkedIn Tumblr

ಮಂಗಳೂರು ಮಾರ್ಚ್ 28 : ಇಂದಿನ ಆಧುನಿಕ ತುಳು ರಂಗಭೂಮಿಯ ಅನೇಕ ಖ್ಯಾತಿ ಕಲಾವಿದರಿಗೆ ಕಲಾಗುರುಗಳಾಗಿದ್ದರು ಮಚ್ಚೇಂದ್ರನಾಥ್ ಪಾಂಡೇಶ್ವರ ಎಂದು ಹಿರಿಯ ಚಲನಚಿತ್ರ ಮತ್ತು ನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಮಲ್ಲೂರು ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಸಹಕಾರದೊಂದಿಗೆ ಪುರಭವನದಲ್ಲಿ ನಡೆಯುತ್ತಿರುವ ತುಳು ನಾಟಕ ಪರ್ಬ – 2018 ರ 4ನೇ ದಿನದ ಕಾರ್ಯಕ್ರಮದಲ್ಲಿ ಮಚ್ಚೇಂದ್ರನಾಥ್ ಪಾಂಡೇಶ್ವರ ಸಂಸ್ಮರಣೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು.

ಬ್ರಿಟಿಷರಿಂದ ಪ್ರಾರಂಭಗೊಂಡ ಕಾಫಿ ಕಂಪೆನಿಯಲ್ಲಿ ಹಲವು ದಶಕಗಳ ಕಾಲ ಅಧಿಕಾರಿಯಾಗಿದ್ದರೂ ತುಳು ಮಣ್ಣಿನ ಬಗ್ಗೆ ಅಪಾರ ಗೌರವ ಇರಿಸಿಕೊಂಡು 160 ಕ್ಕೂ ಅಧಿಕ ನಾಟಕಗಳನ್ನು ಬರೆದು, ನಿರ್ದೇಶಿಸಿ ಮಾತೃ ಭಾಷೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತನ್ನ ಊರಿನ ಶಿಕ್ಷಣದ ಅವಕಾಶ ವಂಚಿತ ದುಡಿಯುವ ವರ್ಗಕ್ಕೆ ಶಿಕ್ಷಣ ಸೌಲಭ್ಯವನ್ನು ನೀಡಲು ರಾತ್ರಿ ಶಾಲೆ ಪ್ರಾರಂಭಿಸಿ ಶಿಕ್ಷಣ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಾಟಕ ಪ್ರದರ್ಶನದ ದಿನಾಂಕ ಮೊದಲು ಪ್ರಕಟಿಸಿ ಬಳಿಕ ದಿನಕ್ಕೊಂದರಂತೆ ದೃಶ್ಯಗಳನ್ನು ಬರೆದು ತನ್ನ ತಂಡದ ಸಹಕಲಾವಿದರಿಗೆ ನೀಡುತ್ತಿದ್ದು ನಾಟಕ ಪ್ರದರ್ಶನದ ದಿನವೇ ಕೊನೆಯ ದೃಶ್ಯ ಬರೆಯುತ್ತಿದ್ದರು ಎಂದು ಮಲ್ಲುರು ಅವರು ಹೇಳಿದರು.

ಚಲನಚಿತ್ರರಂಗದಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿರುವ ಮಚ್ಚೇಂದ್ರನಾಥ್ ಇಂದಿನ ಹಾಸ್ಯ ಪ್ರಧಾನ ನಾಟಕಗಳ ಭರಾಟೆಯಲ್ಲಿ ತೆರೆಮರೆಗೆ ಸಂದರು ಶಿಸ್ತು ಮತ್ತು ಸಿದ್ದಾಂತಕ್ಕೆ ಒತ್ತು ಕೊಟ್ಟು ಸಾಮಾಜಿಕ ಪರಿಣಾಮ ಬೀರುವ ನಾಟಕಗಳನ್ನು ರಚಿಸಿರುವುದು ಪಾಂಡೇಶ್ವರ ಅವರ ಹೆಗ್ಗಳಿಕೆ ಎಂದು ಲಕ್ಷ್ಮಣ್ ಕುಮಾರ್ ನುಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯೆ ಹಿರಿಯ ರಂಗ ಕಲಾವಿದೆ ಜಯಶೀಲ ಮಚ್ಚೇಂದ್ರನಾಥ್ ಪಾಂಡೇಶ್ವರ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.

ಮಹಾನಗರಪಾಲಿಕೆ ಮಾಜಿ ಮೇಯರ್ ಜೆಸಿಂತ ವಿಜಯಾ ಆಲ್ಪ್ರೆಡ್, ಸದಸ್ಯೆ ಸಬಿತಾ ಮಿಸ್ಕಿತ್, ಪಾಂಡೇಶ್ವರವರ ಅಳಿಯ ಅನಿಲ್‍ದಾಸ್, ಮನೀಷ್‍ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಅತಿಥಿಗಳನ್ನು ಗೌರವಿಸಿದರು.

ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಖ್ಯಾತ ರಂಗಕಲಾವಿದ ರಂಗವೇದಿಕೆ ತಜ, ತಮ್ಮ ಲಕ್ಷ್ಮಣರವರನ್ನು ಗೌರವಿಸಲಾಯಿತು. ಅಕಾಡೆಮಿ ಸದಸ್ಯರಾದ ಎ. ಶಿವಾನಂದ ಕರ್ಕೇರ, ಸುಧಾನಾಗೇಶ್, ತಾರನಾಥ ಗಟ್ಟಿ ಕಾಪಿಕಾಡ್, ಬೆನೆಟ್ ಅಮ್ಮಣ್ಣ, ವಿದ್ಯಾಶ್ರೀ ಉಪಸ್ಥಿತರಿದ್ದರು.

Comments are closed.