ಪಾಟ್ನಾ: ಭಾಗಲ್ಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೇ ಅವರ ಪುತ್ರ ಅರಿಜಿತ್ ಶಾಶ್ವತ್ ರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೇ ಪುತ್ರ ಅರಿಜಿತ್ ಶಾಶ್ವತ್ ರನ್ನು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು ಬಂಧಿಸಲಾಗಿದೆ.
ಮಾರ್ಚ್ 17ರಂದು ಹಿಂದೂ ಹೊಸ ವರ್ಷದ ಸಲುವಾಗಿ ಶಾಶ್ವತ್ ನೇತೃತ್ವದಲ್ಲಿ ನಡೆದ ಮೆರವಣಿಗೆ, ಅಲ್ಪಸಂಖ್ಯಾತರು ಹೆಚ್ಚಾಗಿ ಇರುವ ನಾಥನಗರ್ ಮಾರ್ಗವಾಗಿ ಹಾದುಹೋಗಿತ್ತು. ಇದಾದ ಬಳಿಕ ಸಂಘರ್ಷ ಉಂಟಾಗಿತ್ತು. ಈ ಪ್ರಕರಣ ಸಂಬಂಧ ಅರಿಜಿತ್ ಶಾಶ್ವಥ್ ಬಂಧನ ವಾರಂಟ್ ಜಾರಿಯಾಗಿತ್ತು. ಈ ಸಂಬಂಧ ಅರಿಜಿತ್ ಶಾಶ್ವಥ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಮಾರ್ಚ್ 24ರಂದು ನಡೆದ ವಿಚಾರಣೆಯಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದೀಗ ಪಾಟ್ನಾ ಪೊಲೀಸರು ಅರಿಜಿತ್ ಶಾಶ್ವಥ್ ರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪಾಟ್ನಾ ಪೊಲೀಸರು, ಅರಿಜಿತ್ ಶಾಶ್ವಥ್ ಅವರು ಪಾಟ್ನಾ ಜಂಕ್ಷನ್ ನಲ್ಲಿರುವ ಹನುಮಾನ್ ದೇಗುಲದಲ್ಲಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಒಂದು ಪೊಲೀಸ್ ತಂಡವನ್ನು ರವಾನೆ ಮಾಡಿ ಇದೀಗ ಶಾಶ್ವಥ್ ರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ತಿಳಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಂಧಿತ ಅರಿಜಿತ್ ಶಾಶ್ವಥ್, ನಾನು ಯಾವುದೇ ತಪ್ಪು ಮಾಡಿಲ್ಲ. ಭಾಗಲ್ಪುರದಲ್ಲಿ ಈಚೆಗೆ ನಡೆದ ಕೋಮುಗಲಭೆ ಸಂಬಂಧ, ರಾಜಕೀಯ ಒತ್ತಡಕ್ಕೆ ಒಳಗಾಗಿ ಪೊಲೀಸರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಮತ್ತೊಂದು ಸಮುದಾಯದ ಆರೋಪಿಗಳ ವಿರುದ್ಧ ಪೊಲೀಸರು ಈವರೆಗೂ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
Comments are closed.