ಎನ್.ವಿ. ರಮೇಶ್
ನೀವು ಜರ್ಮನಿಗೆ ಭೇಟಿ ನೀಡಿದರೆ ಅಲ್ಲಿ ನೋಡಲೇಬೇಕಾದ ಸ್ಥಳವೆಂದರೆ ದೆವ್ವಗಳ ಸೇತುವೆ.
ಹೆಜ್ಜೆ ಇಟ್ಟಲೆಲ್ಲ ಆತ್ಮೀಯವಾಗಿ ಸ್ವಾಗತಿಸುವ ಸುಂದರ ಹೂಗಳು. ಸದಾ ನವೋಲ್ಲಾಸದಿಂದಲೇ ಗಮನ ಸೆಳೆಯುವ ಹಸಿರ ಸಿರಿ. ವೈವಿಧ್ಯ ಬಗೆಯ ವನ್ಯ ಮೃಗಗಳು ಕುತೂಹಲ ಮೂಡಿಸುತ್ತವೆ. ಇತಿಹಾಸ ಸಾರುವ ಕಟ್ಟಡಗಳು, ವಾಸ್ತು ಶಿಲ್ಪಗಳಿಂದ ಇಡೀ ಸಂಸ್ಕೃತಿಯನ್ನು ಪ್ರವಾಸಿಗರೆದುರು ನಿಲ್ಲಿಸುತ್ತದೆ ಜರ್ಮನಿ ಎನ್ನುವ ಸುಂದರ ದೇಶ.
ಜರ್ಮನಿಯು ನಾನಾ ಸೇತುವೆಗಳಿಗೆ ಫೇಮಸ್. ಅಪರೂಪದ ವಿನ್ಯಾಸದ ಮೂಲಕ ಬೆರಗು ಮೂಡಿಸುವ ಸಾಕಷ್ಟು ಸೇತುವೆಗಳನ್ನು ಒಳಗೊಂಡಿದೆ. ನೀವು ಜರ್ಮನಿ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಭೇಟಿ ನೀಡಲೇಬೇಕಾದ ಸ್ಥಳ ರಾಕೋಟ್ಝ್ ಬ್ರೂಕೆ ದೆವ್ವಗಳ ಸೇತುವೆ. ಕ್ರೋಮ್‌ಲೌ ಪ್ರದೇಶದ ಅಝಾಲಿಯಾ ಹಾಗೂ ರೋಡೋಡೆಂಡ್ರಾನ್ ಉದ್ಯಾನದಲ್ಲಿ ರಾಕೋಟ್ಝ್ ಬ್ರೂಕೆ ದೆವ್ವದ ಸೇತುವೆ ಇದೆ. ಇದನ್ನು 1860ರಲ್ಲಿ ಕಟ್ಟಲಾಗಿದೆ.
ವೈಶಿಷ್ಟ್ಯ
ಇದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಏಕೆಂದರೆ ಇದು ತನ್ನಲ್ಲಿ ವಿಭಿನ್ನ ಆಕರ್ಷಣೆಯನ್ನು ಹುದುಗಿಸಿಟ್ಟುಕೊಂಡಿದೆ. ಮೊನಚಾದ ಬಂಡೆಗಳ ಗೋಪುರಗಳು ಸೇತುವೆಯ ಎರಡೂ ಪಕ್ಕಕ್ಕಿವೆ. ಹರಿಯುವ ನೀರಿನ ತಟದ ಮೇಲಿನ ಮರಗಿಡಗಳಲ್ಲಿನ ಹೂವು, ಎಲೆಗಳಿಂದ ಸೇತುವೆ ಕೆಳಗಡೆ ಹರಿಯುವ ನೀರು ವರ್ಣರಂಜಿತವಾಗಿ ಕಾಣಿಸುತ್ತದೆ.
ಸೇತುವೆ ನಿರ್ಮಾಣದಲ್ಲಿ ಸೈತಾನನ ಪಾತ್ರವಿಲ್ಲದಿದ್ದರೂ ಇದರ ಸೂಕ್ಷ ್ಮ ಕಮಾನಿನಂತಹ ಕೆಲಸ ಮಾನವರಿಂದ ಸಾಧ್ಯವಿಲ್ಲ. ದೆವ್ವ ಅಥವಾ ಸೈತಾನ್ ಮಾಡಿರಬೇಕೆಂಬ ಪ್ರತೀತಿ ಇದೆ. ಮಧ್ಯಕಾಲದಲ್ಲಿ ಇಂಥ ಅನೇಕ ಸೇತುವೆಗಳನ್ನು ನಿರ್ಮಿಸಲಾಯಿತು. ಇವು ಗಾರೆಯಿಂದ ನಿರ್ಮಿಸಲ್ಪಟ್ಟು ಆಕರ್ಷಕವಾಗಿವೆ. ಈ ಸೇತುವೆಯನ್ನು ಯಾವ ಕೋನದಿಂದ ನೋಡಿದರೂ ಪರಿಪೂರ್ಣ ವರ್ತುಲವಾಗಿ ಕಾಣುತ್ತದೆ. ಅಷ್ಟೆ ಅಲ್ಲ, ನೀರಿನಲ್ಲಿ ಇದರ ಪ್ರತಿಫಲಿತವಾಗುತ್ತದೆ. ಈ ಸೇತುವೆ ಮೇಲೆ ನಡೆಯಬಾರದೆಂದು ಸುತ್ತ ಬೇಲಿ ಹಾಕಿದ್ದಾರೆ. ಇದನ್ನು ಫೈಡ್ರಿಜ್ ಹರ್ಮನ್ ರಾಟ್ಸ್‌ಚ್ಕೆ ಎಂಬ ಕ್ರೌಮಲೌದ ಸುಭೇದಾರ ಕಟ್ಟಿಸಿದನಂತೆ. ಇದರ ಎತ್ತರದ ಮೇಲಾವರಣ ಹಾಗೂ ರಾಕೋಟ್ಝ್ ಸೀ ನದಿಯಲ್ಲಿಯ ಪ್ರತಿಬಿಂಬ ಇಡೀ ವರ್ತುಲ ಸೃಷ್ಟಿಸಿ ಪ್ರವಾಸಿಗರನ್ನು ಸೆಳೆಯುತ್ತದೆ. ಅಷ್ಟೆ ಅಲ್ಲ, ಇಲ್ಲಿ ವೈವಿಧ್ಯ ಬಗೆಯ ಉದ್ಯಾನಗಳು ಇವೆ. ಪುರಾತನ ಕಾಲದ ವಾಸ್ತುಶಿಲ್ಪದ ಆಕರ್ಷಣೆಗಳಿವೆ. ಬೇಸಿಗೆಯಲ್ಲಿ ಹೂಗಳು ಅರಳಿ ನಿಂತು ಪ್ರಕೃತಿ ಸೌಂದರ್ಯ ಮತ್ತಷ್ಟು ವೈಭವದಿಂದ ಕೂಡಿರುತ್ತದೆ.
ಸುತ್ತಲಿನ ಸ್ಥಳಗಳು
ಇಲ್ಲಿ ಚಿಕ್ಕ ಚಿಕ್ಕ ಕೊಳಗಳು, ಸರೋವರಗಳಿವೆ. ಕ್ರೋಮ್ಲೌ ಪ್ರದೇಶದಲ್ಲಿ ಫಸ್ಟ್ ಪುಕ್ಲರ್ ಉದ್ಯಾನÜ, ಮುಝಾಕೌಸ್ಕಿ ಉದ್ಯಾನ, ವಾಲ್ಡೈ ಸೇನ್ ಬಾಹ್ನ್, ಟೈರ್ ಪಾಕ್ ವೈಸ್ ವಾಸ್ಸರ್, ಸ್ಕಾಲಾಸ್ ಮಸ್ಕೌ, ವೈಸ್ ವಾಸ್ಸರ್‌ದ ಗಾಜಿನ ವಸ್ತು ಸಂಗ್ರಹಾಲಯ, ಬ್ರೌಯ್ಲರೆಕ್, ಐಸರೇನಾ ಡರ್‌ಟರ್ಮ್ ಆವರ್ ಸ್ಕ್ವೇರನ್ ಬರ್ಗ್, ಜಿಯೋ ಪಾರ್ಕ್ ಲಕ್ ಮುಝೌಕೌವ, ಲಾವ್ ಸಿಯರ್, ಫೈಂಡ್ಲಿಂಗ್ಸ್ ಪಾರ್ಕ್, ನಾಚ್‌ಟನ್ ಮಸ್ಕೌವರ್ ಉದ್ಯಾನ ಕರಾವಳಿ ಸಾಗರ್ ಕರಕುಶಲ ವಸ್ತು ಸಂಗ್ರಹಾಲಯ ಕ್ರಿಸ್ಟ್‌ಲಿಕಾ ರಾಜ್ಯ ಆಫ್ರೆನ್ ಪ್ರಾಣಿ ಸಂಗ್ರಹಾಲಯಗಳಿವೆ.
ಹೋಗುವುದು ಹೇಗೆ?
ಬೆಂಗಳೂರಿನಿಂದ ಬರ್ಲಿನ್‌ಗೆ 25 ಗಂಟೆ 10 ನಿಮಿಷ ವಿಮಾನ ಪ್ರಯಾಣ. ಹೋಗಿ ಬರಲು ಅಂದಾಜು ರೂ. 55,317. ಬರ್ಲಿನ್‌ನಿಂದ 165 ಕಿ.ಮಿ ಕಾರಿನಲ್ಲಿ ಹೋದರೆ ಸ್ಯಾಕ್ಸೋನಿಗೆ 2 ಗಂಟೆ ಪ್ರಯಾಣ.
Comments are closed.