ರಾಷ್ಟ್ರೀಯ

ಪರ್ಸ್‌ ಕದ್ದು ಡಿಎಲ್‌ ಕೊರಿಯರ್‌ ಮಾಡಿದ ಕಳ್ಳ!

Pinterest LinkedIn Tumblr


ಪುಣೆ: ಪ್ರಾಮಾಣಿಕರು ಅಪರೂಪವಾಗುತ್ತಿರುವ ಈ ಕಾಲದಲ್ಲಿ ಕಳ್ಳನೊಬ್ಬ ಪ್ರಾಮಾಣಿಕತೆ ಮೆರೆದ ಸುದ್ದಿ ಇದು! ಮಹಿಳೆಯೊಬ್ಬರ ಕಾರಿನ ಗಾಜು ಒಡೆದು ಪರ್ಸ್‌ ಕದ್ದ ವ್ಯಕ್ತಿಯೊಬ್ಬ ಅದರೊಳಗಿದ್ದ ಡ್ರೈವಿಂಗ್‌ ಲೈಸನ್ಸ್‌ನ್ನು ಅದರಲ್ಲಿದ್ದ ವಿಳಾಸಕ್ಕೆ ಕೊರಿಯರ್‌ ಮಾಡಿದ್ದಾನೆ!

ಈ ಘಟನೆ ನಡೆದಿರುವುದು ಪುಣೆಯಲ್ಲಿ. ಸ್ವಪ್ನಾ ಡೇ ಎಂಬ ಮಹಿಳಾ ಉದ್ಯಮಿಯೇ ಪರ್ಸ್‌ ಕಳೆದುಕೊಂಡು ಡಿಎಲ್‌ ವಾಪಸ್‌ ಪಡೆದವರು.

ಮಾರ್ಚ್‌ 17ರಂದು ಅವರು ಎಂ.ಜಿ.ರೋಡ್‌ನಲ್ಲಿರುವ ತಮ್ಮ ಬಟ್ಟೆಯಂಗಡಿ ಮುಚ್ಚಿ ರೇಸ್‌ ಕೋರ್ಸ್‌ ಕಡೆಗೆ ಎಸ್‌ಯುವಿ ಕಾರಿನಲ್ಲಿ ಹೋಗಿದ್ದರು. ಮೊದಲೆಲ್ಲ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ಅವರು ಕೆಲವು ದಿನಗಳಿಂದ ಮಗ ತೆಗೆದುಕೊಟ್ಟ ಕಾರನ್ನು ಬಳಸುತ್ತಿದ್ದರು. ಅಲ್ಲಿ ಕಾರು ನಿಲ್ಲಿಸಿ ವಾಕ್‌ ಮಾಡಿ ಮರಳಿ ಬಂದಾಗ ಹಿಂಬದಿ ಸೀಟಿನಲ್ಲಿದ್ದ ಪರ್ಸ್‌ ನಾಪತ್ತೆಯಾಗಿತ್ತು. ಹಿಂಬಾಗಿಲ ಗಾಜು ಮುರಿದು ಅದನ್ನು ಕಳವು ಮಾಡಲಾಗಿತ್ತು.

ಯಾರೋ ಗಿಫ್ಟ್‌ ಆಗಿ ಕೊಟ್ಟಿದ್ದ ಬಹುಮೌಲ್ಯದ ಬ್ರ್ಯಾಂಡೆಡ್‌ ಪರ್ಸ್‌ ಬಗ್ಗೆ ಸ್ವಪ್ನಾ ಆವರಿಗೆ ಭಾವುಕ ಪ್ರೀತಿ ಇತ್ತು. ಕಳವಾದ ಪರ್ಸ್‌ನಲ್ಲಿ 1500 ರೂ. ನಗದು, ಕೆಲವು ದಾಖಲೆಗಳು, ಕೆಲವು ಅಮೂಲ್ಯ ವಸ್ತುಗಳೂ ಇದ್ದವು. ಅದೃಷ್ಟಕ್ಕೆ ಪರ್ಸ್‌ ಪಕ್ಕದಲ್ಲಿದ್ದ ಐ ಪ್ಯಾಡ್‌ ಕಳ್ಳನ ಕಣ್ಣಿಗೆ ಬಿದ್ದಿರಲಿಲ್ಲ.

ಸ್ವಪ್ನಾ ಅವರಿಗೆ ಪರ್ಸ್‌ ಕಳೆದುಹೋಗಿದ್ದ್ದು ಬೇಸರವಾಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಡ್ರೈವಿಂಗ್‌ ಲೈಸನ್ಸ್‌ ಮತ್ತೆ ಮಾಡಿಸಬೇಕಲ್ಲ ಎಂಬ ಬೇಸರ. ಆನ್‌ಲೈನ್‌ನಲ್ಲಿ ಡುಪ್ಲಿಕೇಟ್‌ ಲೈಸನ್ಸ್‌ ಪಡೆಯಬಹುದು ಎಂದು ಗೊತ್ತಿದ್ದರೂ ಸಹಾಯ ಮಾಡೋರು ಯಾರೂ ಇರಲಿಲ್ಲ. ಮಗ ವರ್ಷಾಂತ್ಯದ ಬ್ಯುಸಿಯಲ್ಲಿದ್ದರು. ಹೀಗಾಗಿ ಏಪ್ರಿಲ್‌ 1ರ ನಂತರ ಮಾಡೋಣ ಎಂದಿದ್ದರು.

ಕಳವಾದ 11 ದಿನಗಳ ಬಳಿಕ ಅವರು ಮೊದಲು ವಾಸವಾಗಿದ್ದ ಮನೆಯ ಪಕ್ಕದವರೊಬ್ಬರು ಬಂದು ಒಂದು ಕೊರಿಯರ್‌ ಕೈಗಿತ್ತರು. ತೆರೆದು ನೋಡಿದರೆ ಅದರಲ್ಲಿ ಡ್ರೈವಿಂಗ್‌ ಲೈಸನ್ಸ್‌ ಇತ್ತು. ಕಳ್ಳ ಹಳೆಯ ವಿಳಾಸಕ್ಕೆ ಅದನ್ನು ಕೊರಿಯರ್‌ ಮಾಡಿದ್ದ.

”ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳೇ ಸಿಗಲಿಲ್ಲ. ಕೂಡಲೇ ಮಗನಿಗೆ ಫೋನ್‌ ಮಾಡಿ ಕಳ್ಳ ಲೈಸನ್ಸ್‌ ಕಳುಹಿಸಿಕೊಟ್ಟಿದ್ದಾನೆ ಎಂದು ಹೇಳಿದೆ,” ಎಂದು ಖುಷಿಯಿಂದ ಹೇಳುತ್ತಾರೆ ಸ್ವಪ್ನಾ.

Comments are closed.