ಚಿಕ್ಕಮಗಳೂರು: ಶಿವಸೇನೆಯನ್ನು ಶ್ರೀರಾಮಸೇನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ನೇತೃತ್ವದಲ್ಲಿ 60 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೀವರ್ಗಿ ವಿಧಾನಸಭೆ ಕ್ಷೇತ್ರದಿಂದ ಸಿದ್ದಲಿಂಗ ಸ್ವಾಮೀಜಿ ಸ್ಪರ್ಧಿಸುತ್ತಾರೆ. ನಾನು ಶೃಂಗೇರಿ ಅಥವಾ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಈ ಬಗ್ಗೆ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು
‘ಹಿಂದುತ್ವ ನಮ್ಮ ಪ್ರಮುಖ ಅಜೆಂಡಾ. ಬಿಜೆಪಿಯದ್ದು ಡೋಂಗಿ ಹಿಂದುತ್ವವಾಗಿದ್ದು, ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಹೊರತು, ರಾಜಕೀಯಕ್ಕಾಗಿ ಹಿಂದುತ್ವವಲ್ಲ’ ಎಂದು ಸ್ಪಷ್ಟಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರು ಗೋಮಾಂಸ ಸಾಗಾಟದಲ್ಲಿ ಭಾರತ ನಂಬರ್ 1 ಆಗಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಗೋಮಾಂಸ ನಿಷೇಧದ ಬಗ್ಗೆ ಡೋಂಗಿ ಮಾತುಗಳನ್ನಾಡುತ್ತಾರೆ. ಗೋಮಾಂಸ ಎನ್ನುವುದು ಬಿಜೆಪಿಯ ಬೂಟಾಟಿಕೆ. ಗೋಮಾಂಸ ನಿಷೇಧದ ಹಾಗೆಯೇ ದತ್ತಪೀಠವನ್ನು ಸಹ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ.ರವಿ ದತ್ತಪೀಠ ವಿವಾದದಿಂದಲೇ ಮೂರು ಭಾರಿ ಶಾಸಕರಾಗಿದ್ದಾರೆ. ದತ್ತಪೀಠ ಗುಹೆ ಕಟ್ಟಲಾಗದ ಸಿಟಿ ರವಿ, 8 ಕೋಟಿ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಕೊಂಡಿದ್ದಾರೆ ಎಂದು ಮುತಾಲಿಕ್ ಕಿಡಿಕಾರಿದರು.
ಗುತ್ತೇದಾರ್ ಬಿಜೆಪಿ ಸೇರ್ಪಡೆಗೆ ಆಕ್ರೋಶ
ನೂರಾರು ಮಸೀದಿ ಕಟ್ಟಿದವನನ್ನು ಬಿಜೆಪಿಗೆ ಕರೆತಂದದ್ದು ಏಕೆ ಎಂದು ಪ್ರಶ್ನಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮಾಲೀಕಯ್ಯ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಯಾರಿಗೆ ಪಾಠ ಹೇಳಲು ಹೊರಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Comments are closed.