ಕರಾವಳಿ

ನೀತಿ ಸಂಹಿತೆ ಉಲ್ಲಂಘನೆ :’ಇವನರ್ವ’ ಪದ ಬಳಕೆ ಮಾಡಿದ ಯಕ್ಷಗಾನ ಕಲಾವಿದನಿಗೆ ನೋಟಿಸ್ – ವಾಪಾಸ್..!

Pinterest LinkedIn Tumblr

ಮಂಗಳೂರು, ಎಪ್ರಿಲ್.4: ರಾಜಕೀಯ ಪ್ರೇರಿತ ಶಬ್ದ ಬಳಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪದಡಿ ಯಕ್ಷಗಾನ ಕಲಾವಿದರೊಬ್ಬರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದ ಘಟನೆ ವರದಿಯಾಗಿದೆ.

ಕಟೀಲು ಮೇಳದ ಕಲಾವಿದ ಪೂರ್ಣೇಶ್ ವಿರುದ್ಧ ಈ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರನ್ನು ವಜಾಗೊಳಿಸುವಂತೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾ ಅಧಿಕಾರಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಬಸವಣ್ಣನ ವಚನವನ್ನು ಉಲ್ಲೇಖಿಸುತ್ತಾ ನೀಡಿದ್ದ ‘ಇವನರ್ವ’ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಕೆ ಮಾಡಿದ್ದೇ ನೋಟಿಸ್‌ಗೆ ಕಾರಣ ಎಂದು ಹೇಳಲಾಗಿದೆ.

ಪೂರ್ಣೇಶ್ ಎಪ್ರಿಲ್ 1ರಂದು ಮೂಡುಬಿದಿರೆಯ ಪಡುಮಾರ್ನಾಡಿನ ಬನ್ನಡ್ಕ ಎಂಬಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಶಬ್ದ ಬಳಸಿದ್ದಾರೆ. ಆದ್ದರಿಂದ ಅವರನ್ನು ಮೇಳದಿಂದ ವಜಾಗೊಳಿಸವಂತೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ನೀಡಿರುವ ನೋಟಿಸ್‌ನಲ್ಲಿ ಕಟೀಲು ಮೇಳಕ್ಕೆ ಸೂಚಿಸಿದ್ದಾರೆ.

ಬೆಂಗಳೂರು ಮತ್ತು ಮಂಗಳೂರು ಚುನಾವಣೆ ಆಯೋಗದ ಕಚೇರಿ ಯಿಂದ ಅಧಿಕಾರಿಗಳು ಕಟೀಲು ಮೇಳದ ಮುಖ್ಯಸ್ಥರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ವಿಚಾರಿಸಿಕೊಂಡು. ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಆ ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಸೂಚನೆ ನೀಡಿದ್ದರು.

ಕಲಾವಿದರಿಂದ ತೀವ್ರ ಅಸಮಾಧಾನ : 

ಈ ವಿಷಯ ಯಕ್ಷಗಾನ ಮೇಳಗಳ ವಿರೋಧಕ್ಕೆ ಕಾರಣವಾಗಿತ್ತು. ಚುನಾವಣಾ ಆಯೋಗದ ಕ್ರಮಕ್ಕೆ ಯಕ್ಷಗಾನ ಕಲಾವಿದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,ಯಕ್ಷಗಾನ ಪ್ರಸಂಗ ಸಂದರ್ಭದಲ್ಲಿ ವಿದೂಷಕ ಬಳಸಿದ “ಇವನರ್ವ” ಪದಕ್ಕೂ ರಾಜಕೀಯಗೂ ಯಾವುದೇ ಸಂಬಂಧ ಇಲ್ಲ. ಯಾರ ಹೆಸರನ್ನು ಇಲ್ಲಿ ಪ್ರಸ್ಥಪಿಸಲಾಗಿಲ್ಲ . ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರೋದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮಾರ್ಚ್ 24ರಂದು ಕೇರಳದಲ್ಲಿ ನಡೆದ ಯಕ್ಷಗಾನ : ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ..

ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಲಾವಿದ ಪೂರ್ಣೇಶ್, ಎಪ್ರಿಲ್ 1ರಂದು ನಾನು ಸುಳ್ಯದ ಐವರ್ನಾಡಿನಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿದ್ದೆ. ಆದರೆ ‘ಇವನರ್ವ’ ಪದದ ಸಂಭಾಷಣೆಯನ್ನು ತಾನು ಬಳಸಿದ್ದು ಮಾರ್ಚ್ 24ರಂದು ಕೇರಳದ ಮಾನ್ಯ ಎಂಬಲ್ಲಿ ನಡೆದ ಯಕ್ಷಗಾನದಲ್ಲಿ. ಅಂದರೆ ಈ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಮಾ.27ಕ್ಕಿಂತ ಮೊದಲು ನಡೆದಿದೆ.

ಆದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಆಯೋಗದ ನೋಟಿಸ್‌ಗೆ ಕಟೀಲು ಮೇಳ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.

ನೊಟೀಸ್ ವಾಪಾಸ್..!

ಇದೀಗ ಚುನಾವಣಾ ಆಯೋಗವು ತನ್ನ ತಪ್ಪನ್ನು ತಿದ್ದಿಕೊಂಡಿದ್ದು, ಯಕ್ಷಗಾನ ಪ್ರದರ್ಶನವು ಕೇರಳದಲ್ಲಿ ನಡೆದಿರುವುದರಿಂದ ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯ ಆಗದ ಕಾರಣ, ಅದಲ್ಲದೆ ಪ್ರದರ್ಶನದಲ್ಲಿ ಯಾವುದೇ ವ್ಯಕ್ತಿಯ ಹೆಸರು ಬಳಕೆ ಮಾಡದೇ ಇರುವ ಕಾರಣ ನೊಟೀಸ್ ಅನ್ನು ವಾಪಾಸ್ ಪಡೆದಿದೆ ಎನ್ನಲಾಗಿದೆ.

ಏನಿದು “ಇವನಾರ್ವ ಇವನಾರ್ವ ಪ್ರಸಂಗ :

ಮಂಗಳೂರು : ಇತ್ತೀಚೆಗೆ ಅಥಣಿಯಲ್ಲಿ ಬೃಹತ್ ಜನಾಶೀರ್ವಾದ ಸಮಾವೇಶದಲ್ಲಿವನ್ನು ಉದ್ದೇಶಿಸಿ ಮಾನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಸವಣ್ಣ ಅವರ ವಚನಗಳನ್ನು ಪ್ರಸ್ಥಾಪಿಸಿ ವಚನದ 2 ಸಾಲುಗಳನ್ನು ತಮ್ಮ ಭಾಷಣದಲ್ಲಿ ಬಳಸಿಕೊಂಡಿದ್ದರು. ಆದರೆ ರಾಹುಲ್ ಗಾಂಧಿ ವಚನ ಉಚ್ಚರಿಸಿದ ಶೈಲಿ ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.”ಇವನಾರ್ವ ಇವನಾರ್ವ , ಇವನಂಬ್ವ ಇವನಂಬ್ವ” ಎಂದು ರಾಹುಲ್ ಗಾಂಧಿ ವಚನ ಉಚ್ಚರಿಸಿದ ಶೈಲಿ ಈಗ ಯಕ್ಷಗಾದಲ್ಲೂ ಅನುಕರಣೆಗೊಂಡಿದೆ.

ಇತ್ತೀಚೆಗೆ ಕೇರಳದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನ ಒಂದರಲ್ಲಿ ವಿದೂಷಕ ಪೂರ್ಣೇಶ್ ರಾಹುಲ್ ಗಾಂಧಿ ಅವರ ವಚನ ಶೈಲಿ ಪ್ರಸ್ಥಾಪಿಸಿ ನೆರೆದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಶ್ರೀಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ಪ್ರದರ್ಶನದಲ್ಲಿ ರಾಹುಲ್ ಗಾಂಧಿ ಅವರ ವಚನ ಉಚ್ಚರಿಸಿದ ಶೈಲಿಯನ್ನು ಬಳಸಿಕೊಂಡಿದ್ದಾರೆ.

ಈ ನಡುವೆ ಬಸವಣ್ಣ ಅವರ “ನುಡಿದಂತೆ ನಡೆ” ವಾಕ್ಯವನ್ನು ರಾಹುಲ್ ಗಾಂಧಿ ಉಚ್ಚರಿಸಿದ್ದ “ನುಡಿದಂಟೆ ನಡೆ” ಯನ್ನು ಕೂಡ ಯಕ್ಷಗಾನ ಪ್ರಸಂಗದಲ್ಲಿ ಅನುಕರಣೆ ಮಾಡಲಾಗಿತ್ತು. ಈ ಯಕ್ಷಗಾನ ಪ್ರಸಂಗದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Comments are closed.