ಮುಂಬಯಿ : ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವ ಭಾರತೀಯ ಮಹಿಳೆಯರು ಸಾಮಾನ್ಯರಿಗೆ ಪೊಲೀಸರಿಗೆ ದೂರು ನೀಡಲು ವಿಳಂಬಿಸುತ್ತಾರೆಯೇ ವಿನಾ ಅವರು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಸುಳ್ಳು ಹೇಳುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಲೈಂಗಿಕ ದೌರ್ಜನ್ಯದ ದೂರು ನೀಡಲು ವಿಳಂಬವಾದಲ್ಲಿ ದೂರುದಾರ ಮಹಿಳೆ ಸುಳ್ಳು ಹೇಳುತ್ತಿದ್ದಾಳೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದಿರುವ ಬಾಂಬೆ ಹೈಕೋರ್ಟ್, ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು ಪುರುಷರು ಅಪರಾಧಿಗಳೆಂಬ ಹಾಗೂ ಅವರಿಗೆ ನೀಡಲಾಗಿದ್ದ 10 ವರ್ಷಗಳ ಜೈಲು ಶಿಕ್ಷೆಯ ಕೆಳ ಕೋರ್ಟಿನ ತೀರ್ಪನ್ನು ಎತ್ತಿಹಿಡಿಯಿತು.
ಸಾಮೂಹಿಕ ಅತ್ಯಾಚಾರ ಎಸಗಿದ ಅಪರಾಧಕ್ಕೆ ತಮಗೆ 2013ರ ಎಪ್ರಿಲ್‌ನಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದ ಸೆಶನ್ಸ್ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳಾದ ದತ್ತಾತ್ರೇಯ ಕೊರ್ಡೆ, ಗಣೇಶ್ ಪರದೇಶಿ, ಪಿಂಟು ಖೋಸ್ಕರ್ ಮತ್ತು ಗಣೇಶ್ ಝೋಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಧೀಶ ಎ ಎಂ ಬದರ್ ವಜಾ ಮಾಡಿ, ಶಿಕ್ಷೆಯನ್ನು ದೃಢೀಕರಿಸಿ ತೀರ್ಪು ನೀಡಿದರು.
2012ರ ಮಾರ್ಚ್ 15ರಂದು ತನ್ನ ಸ್ನೇಹಿತನೊಂದಿಗೆ ನಾಶಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ದೇವಸ್ಥಾನದಿಂದ ಮಹಿಳೆಯು ಮರಳುತ್ತಿದ್ದಾಗ ಆಕೆಯ ಜತೆಗಿನ ವ್ಯಕ್ತಿಯನ್ನು ಹೊಡೆದು ಹಲ್ಲೆ ನಡೆಸಿ ಬಳಿಕ ಈ ನಾಲ್ವರು ಆರೋಪಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
-ಉದಯವಾಣಿ
Comments are closed.