ನವದೆಹಲಿ: ಹಾಲಿ ಐಪಿಎಲ್ 2018ರ ಟೂರ್ನಿಯಲ್ಲಿ ಕಳಪೆ ಅಂಪೈರಿಂಗ್ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ತೀರ್ಪು ನೀಡುವಾಗ ಹೆಚ್ಚು ಜಾಗರೂಕರಾಗಿರುವಂತೆ ಅಂಪೈರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯದ ಬಳಿಕ ರೆಫರಿಗಳೊಂದಿಗೆ ಚರ್ಚೆ ನಡೆಸಿದ ರಾಜೀವ್ ಶುಕ್ಲಾ ಅವರ, ಅಂಪೈರ್ ಗಳೊಂದಿಗೆ ಚರ್ಚೆ ಮಾಡಿ ಜಾಗರೂಕರಾಗಿರುವಂತೆ ಹೇಳಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ತಂತ್ರಜ್ಞಾನದ ನೆರವು ಪಡೆಯುವಂತೆಯೂ ಸಲಹೆ ನೀಡಿದ್ದಾರೆ. ಎಂದು ತಿಳಿದುಬಂದಿದೆ.
ಕ್ರಿಕೆಟ್ ನಲ್ಲಿ ಕಳಪೆ ಅಂಪೈರಿಂಗ್ ಸಾಮಾನ್ಯವಾದರೂ ಹಾಲಿ ಐಪಿಎಲ್ ಟೂರ್ನಿಯಲ್ಲಿ ಸತತ ಪಂದ್ಯಗಳಲ್ಲಿ ಕಳಪೆ ಅಂಪೈರಿಂಗ್ ಭಾರಿ ಸದ್ದು ಮಾಡಿತ್ತು. ಪ್ರಮುಖವಾಗಿ 2 ವಾರದಳ ಹಿಂದೆ ನಡೆದಿದ್ದ ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಬೌಲರ್ ನೋಬಾಲ್ ಎಸೆದಿದ್ದರೂ, ಅಂಪೈರ್ ಕಣ್ತಪ್ಪಿನಿಂದ ಬೌಲರ್ ಬಚಾವ್ ಆಗಿದ್ದ.
ಅಂತೆಯೇ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಇಂತಹುದೇ ಪ್ರಮಾದವಾಗಿತ್ತು. ಗೆಲುವಿಗಾಗಿ ಆರ್ಸಿಬಿ ಹೋರಾಟ ನಡೆಸುತ್ತಿದ್ದಾಗ 18 ಓವರ್ ಅಂತ್ಯಕ್ಕೆ 8 ವಿಕೆಟ್ ಗೆ 137 ರನ್ ಗಳಿಸಿತ್ತು. ಈ ವೇಳೆ ಜಸ್ ಪ್ರೀತ್ ಬುಮ್ರಾ ಎಸೆದ ಓವರ್ ನಲ್ಲಿ ಉಮೇಶ್ ಯಾದವ್ ಕ್ಯಾಚ್ ನೀಡಿ ಔಟಾದರು. ಡಗೌಟ್ ಕಡೆಗೆ ಹೋಗುತ್ತಿದ್ದ ಉಮೇಶ್ ಯಾದವ್ ರನ್ನು ನೋಬಾಲ್ ಪರಿಶೀಲನೆಗಾಗಿ ಅಂಪೈರ್ ತಡೆದರು. ಈ ವೇಳೆ ಪರಿಶೀಲನೆ ನಡೆಸಿದ ಮೂರನೇ ಅಂಪೈರ್ ಪರಿಶೀಲನೆ ಮಾಡಿದ ವಿಡಿಯೋದ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಉಮೇಶ್ ಯಾದವ್ ಕಂಡಿದ್ದರು. ಉಮೇಶ್ ಗೆ ಎಸೆದ ಎಸೆತದ ಬದಲು ತಂಡದ ನಾಯಕ ವಿರಾಟ್ ಕೊಹ್ಲಿ ಎದುರಿಸಿದ ಎಸೆತವನ್ನು ಮೂರನೇ ಅಂಪೈರ್ ಪರಿಶೀಲನೆ ಮಾಡಿದ್ದರು. ಈ ವೇಳೆ ಅಂಪೈರ್ ಪ್ರಮಾದವನ್ನು ಯಾರು ಸೂಕ್ಷ್ಮವಾಗಿ ಪರಿಶೀಲಿಸಲಿಲ್ಲ. ಜತೆಗೆ ಆರ್ಸಿಬಿ ಸೋಲಿನ ಖಚಿತತೆ ಇದ್ದಿದ್ದರಿಂದ ದೊಡ್ಡ ವಿವಾದ ಕೂಡ ಆಗಲಿಲ್ಲ.
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಸಮಾಧಾನ ಕೂಡ ವ್ಯಕ್ತವಾಗಿತ್ತು.
Comments are closed.