ಕರ್ನಾಟಕ

ಭರ್ಜರಿ ರೋಡ್ ಷೋ ಮೂಲಕ ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ; ಈ ಕ್ಷೇತ್ರದಲ್ಲಿ ಒಂದೇ ದಿನ ಪ್ರಚಾರ ಮಾಡುತ್ತೇನೆ ಎಂದ ಸಿಎಂ

Pinterest LinkedIn Tumblr

ಬಾದಾಮಿ: ತೀವ್ರ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ ಬಾದಾಮಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರಾದ ಸಿ ಎಂ ಇಬ್ರಾಹಿಂ, ಎಸ್​. ಆರ್​. ಪಾಟೀಲ್​, ಸಚಿವ ತಿಮ್ಮಾಪುರ, ಎಚ್​.ಕೆ. ಪಾಟೀಲ್​, ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ, ಈ ಹಿಂದೆ ಟಿಕೆಟ್ ಘೋಷಣೆಯಾಗಿದ್ದ ದೇವರಾಜ್ ಪಾಟೀಲ್ ಸೇರಿದಂತೆ ಹಲವು ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.

ಈ ವೇಳೆ ಮಾತನಾಡಿದ ಸಿದ್ದರಾಮ್ಯಯ ಅವರು, ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರೆ. ನಾನು ಕೇವಲ ಒಂದು ದಿನ ಮಾತ್ರ ಪ್ರಚಾರ ಮಾಡುತ್ತೇನೆ. ಎರಡೂ ಕ್ಷೇತ್ರದಲ್ಲಿ ನಾನು ಗೆಲುವು ಸಾಧಿಸುತ್ತೇನೆ. ನಾನು ಯಾವುದೇ ಸರ್ವೆಯನ್ನು ನಂಬುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಆಗಮಿಸಿದ ಸಿದ್ದರಾಮಯ್ಯ ಅವರು ಬನಶಂಕರಿ ದೇವಿಯ ಆಶೀರ್ವಾದ ಪಡೆದರು. ದೇವಿಯ ದರ್ಶನ ಪಡೆದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು ಈ ಹಿಂದೆ ನಾನು ಕೊಪ್ಪಳದಿಂದಲೂ ಎಂಪಿ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಈಗ ಇಲ್ಲಿ ಸ್ಪರ್ಧಿಸುವಂತೆ ಈ ಭಾಗದ ಜನರು ಒತ್ತಾಯಿಸಿದರು. ಅಲ್ಲದೆ ಹೈಕಮಾಂಡ್​ ಮೇಲೂ ಒತ್ತಡ ತಂದಿದ್ದರು. ಹೀಗಾಗಿ ಬಾದಾಮಿಯಿಂದ ಸ್ಪರ್ಧಿಸುವಂತೆ ಹೈಕಮಾಂಡ್​ ನನಗೆ ಸೂಚನೆ ನೀಡಿತು ಎಂದು ತಿಳಿಸಿದರು.

ಇದೇ ವೇಳೆ 2ನೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದಾರಮಯ್ಯ ಅವರು, ಪ್ರಧಾನಿ ಮೋದಿ ಅವರು ವಾರಾಣಸಿ, ವಡೋದರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೂ ಸಹ ಎರಡೆರಡು ಕಡೆ ಸ್ಪರ್ಧಿಸಿದ್ದಾರೆ. ಅವೆಲ್ಲಾ ಎರಡು ಕಡೆ ಯಾಕೆ ನಿಂತಿದ್ದರು? ಅವರಿಗೆ ಸೋಲಿನ ಭಯವಿತ್ತೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Comments are closed.