ಮಂಗಳೂರು, ಎಪ್ರಿಲ್ 29: ನಗರದ ಪಂಪ್‌ವೆಲ್ ಸರ್ಕಲ್ ಬಳಿ ರವಿವಾರ ಬೆಳಿಗ್ಗೆ ನಡೆದ ರಸ್ತೆ ಪಘಾತದಲ್ಲಿ ದ್ವಿಚಕ್ರ ವಾಹನ ಸವಾರ (ಯುವಕ) ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ವಿಶ್ವನಾಥ್ ಎಂಬವರ ಪುತ್ರ ಕುಂಪಲ ನಿವಾಸಿ ಅಕ್ಷಯ್.ಎಸ್ ( 26) ಎಂದು ಗುರುತಿಸಲಾಗಿದೆ.
ಕಾಸರಗೋಡು ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದ ಸರಕು ಸಾಗಾಟದ ಲಾರಿ ಮತ್ತು ಅದೇ ರಸ್ತೆಯಾಗಿ ಬರುತ್ತಿದ್ದ ದ್ವಿಚಕ್ರ ವಾಹನದ ನಡುವೆ ಈ ಅಪಘಾತ ಸಂಭವಿಸಿದ್ದು, ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತ ನಡೆದ ತಕ್ಷಣ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಅಕ್ಷಯ್ ನಗರದ ನೃತ್ಯ ತಂಡವೊಂದರ ಸದಸ್ಯ ಎನ್ನಲಾಗಿದ್ದು, ಇಂದು ಬೆಳಿಗ್ಗೆ ನೃತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ನಡೆದ ಪಂಪ್‌ವೆಲ್ ಸರ್ಕಲ್ ಬಳಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಟ್ರಾಫಿಕ್ ಅನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ರಸ್ತೆ ಕಾಮಾಗಾರಿ ಅವ್ಯವಸ್ಥೆ ಅಪಘಾತಕ್ಕೆ ಕಾರಣ : ಸ್ಥಳೀಯರ ಆರೋಪ
ಪಂಪ್‌ವೆಲ್ ಸರ್ಕಲ್ ಬಳಿ ಹಲವು ವರ್ಷಗಳಿಂದ ನಡೆಯುತ್ತಿರುವ ರಸ್ತೆ ಕಾಮಾಗಾರಿಯ ವಿಳಂಭ ಹಾಗೂ ಅವ್ಯವಸ್ಥೆಯಿಂದಾಗಿ ಈ ಪರಿಸರದಲ್ಲಿ ಅಗಾಗ ಅಪಘಾತಗಳು ನಡೆಯುತ್ತಿರುತ್ತದೆ ಎಂದು ಆರೋಪಿಸಿರುವ ಸ್ಥಳೀಯ ನಾಗರೀಕರು ಹಾಗೂ ಸಾರ್ವಜನಿಕರು ಈ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.
Comments are closed.