ಕರ್ನಾಟಕ

ಪ್ರಚಾರದಲ್ಲಿ ಏಕಾಂಗಿಯಾದ ಬಿಎಸ್‌ವೈ

Pinterest LinkedIn Tumblr


ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಹಠದಲ್ಲಿರುವ ಬಿಜೆಪಿಯಲ್ಲಿ ಈಗ ಒಗ್ಗಟ್ಟು ಹಾಗೂ ಉತ್ಸಾಹದ ಕೊರತೆ ಎದುರಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬಹುತೇಕ ನಾಯಕರು ಪ್ರಚಾರದತ್ತ ಸುಳಿಯುತ್ತಿಲ್ಲ. ರಾಜ್ಯ ನಾಯಕರ ಈ ನಿರ್ಲಕ್ಷ್ಯದಿಂದಾಗಿ ಚುನಾವಣೆ ಗೆಲುವಿಗೆ ಯಡಿಯೂರಪ್ಪ ಅವರೊಬ್ಬರೇ ಏಕಾಂಗಿಯಾಗಿ ರಾಜ್ಯ ಸುತ್ತುವ ಪರಿಸ್ಥಿತಿ ಬಂದಿದೆ.

ಚುನಾವಣೆ ಪ್ರಕ್ರಿಯೆ ಆರಂಭವಾದಾಗಿನಿಂದಲೂ, ರಾಜ್ಯದ ಕೆಲ ಬಿಜೆಪಿ ಹೊರತುಪಡಿಸಿ ಇನ್ನುಳಿದ ನಾಯಕರು ಪ್ರಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇದರ ಮೊದಲ ಭಾಗವಾಗಿ 72 ದಿನಗಳ ಕಾಲ ರಾಜ್ಯಾದ್ಯಂತ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಏಕಾಂಗಿಯಾಗಿ ಪಕ್ಷದ ರಾಜ್ಯಾಧ್ಯಕ್ಷರು ಸುತ್ತಿ ಬಂದರು.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಬಂದಾಗ ಕಾಣಿಸಿಕೊಳ್ಳುವ ನಾಯಕರು ಮತ್ತೆ ನಾಪತ್ತೆಯಾಗುತ್ತಿದ್ದಾರೆ. ಇದನ್ನು ಗಮನಿಸಿರುವ ರಾಷ್ಟ್ರೀಯ ನಾಯಕರು, ಒಗ್ಗಟ್ಟು ಪ್ರದರ್ಶಿಸುವಂತೆ ಎಷ್ಟು ಸೂಚನೆ ನೀಡುತ್ತಿದ್ದರೂ ಅದು ಸಾಧ್ಯವಾಗಿಲ್ಲ. ಈ ಒಡಕು 12 ದಿನಗಳಿರುವಾಗಲೂ ಮುಂದುವರಿದಿದೆ.

ರಾಜ್ಯ ಬಿಜೆಪಿಯಲ್ಲಿರುವ ಪ್ರಮುಖ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸದಾನಂದ ಗೌಡ, ಅನಂತಕುಮಾರ ಸೇರಿದಂತೆ ಅನೇಕ ಮಾಜಿ ಶಾಸಕರು, ಸಚಿವರು, ಯಡಿಯೂರಪ್ಪ ಅವರೊಂದಿಗೆ ರಾಜ್ಯ ಪ್ರವಾಸ ನಡೆಸದೇ ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತಗೊಳ್ಳುತ್ತಿದ್ದಾರೆ. ಈ ಎಲ್ಲ ನಾಯಕರಿಗೆ ಬಹುತೇಕ ತಮ್ಮ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದ್ದರೂ, ಇತರೆ ಕ್ಷೇತ್ರಗಳತ್ತ ತೆರಳಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯನಿರ್ವಹಿಸದೇ ರ್ಯಾಲಿ, ಸಮಾವೇಶಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಯಡಿಯೂರಪ್ಪ ಅವರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಾಜ್ಯಾದ್ಯಂತ ಪ್ರವಾಸ ನಡೆಸುತ್ತಿದ್ದರೂ, ಅವರಿಗೆ ರಾಜ್ಯದ ಯಾವ ಹಿರಿಯ ನಾಯಕರೂ ಸಾಥ್ ನೀಡುತ್ತಿಲ್ಲ. ಆದ್ದರಿಂದ ಯಡಿಯೂರಪ್ಪ ಅವರು ಸ್ಥಳೀಯ ನಾಯಕರನ್ನೇ ನೆಚ್ಚಿಕೊಂಡು ಪಕ್ಷದ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಆಯ್ಕೆಯಾದಾಗಿನಿಂದಲೂ, ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುವಲ್ಲಿ ರಾಜ್ಯ ನಾಯಕರು ವಿಫಲರಾಗಿದ್ದರು. ಚುನಾವಣೆ ವೇಳೆಗೆ ಇದನ್ನು ಸರಿಪಡಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವ ವಿಶ್ವಾಸದಲ್ಲಿದ್ದ ಯಡಿಯೂರಪ್ಪ ಹಾಗೂ ವರಿಷ್ಠರು ಇದರಲ್ಲಿ ವಿಫಲರಾಗಿದ್ದಾರೆ. ಫಲವಾಗಿ ಪಕ್ಷವನ್ನು ಗೆಲ್ಲಿಸುವುದಕ್ಕೆ ಎಲ್ಲ ನಾಯಕರು ಒಂದಾಗಿ ಹೋಗಬೇಕಿದ್ದ ಸಮಯದಲ್ಲಿ, ಯಡಿಯೂರಪ್ಪ ಸ್ಥಳೀಯ ನಾಯಕರನ್ನು ಕಟ್ಟಿಕೊಂಡು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

Comments are closed.