ಮಂಗಳೂರು, ಮೇ 1: ಮುಂಬರುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ಮಾದರಿ ನೀತಿ ಸಂಹಿತೆಯಂತೆ ದ.ಕ. ಜಿಲ್ಲೆಯಲ್ಲಿ ಈವರೆಗೆ 15,89,500 ರೂ. ವನ್ನು ಮುಟ್ಟುಗೋಲು ಹಾಕಲಾಗಿದೆ. ಅದಲ್ಲದೆ 23,784.825 ಲೀ. ಮದ್ಯ ಹಾಗೂ 6 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಮಂಗಳವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ಬಗ್ಗೆ ಮಾಹಿತಿ ನೀಡಿದರು. ಮುಟ್ಟುಗೋಲು ಹಾಕಲಾಗಿದ್ದ 15,89,500 ರೂ. ನಲ್ಲಿ 8,84,500 ರೂ.ವನ್ನು ಸೂಕ್ತ ದಾಖಲೆ ಪರಿಶೀಲಿಸಿದ ಬಳಿಕ ಜಿಲ್ಲಾ ಪರಿಹಾರ ಸಮಿತಿಯ ಮೂಲಕ ಬಿಡುಗಡೆ ಮಾಡಲಾಗಿದೆ ಎಂದವರು ಹೇಳಿದರು.
ಮತದಾನ ಪ್ರಕ್ರಿಯೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಇವಿಎಂಗಳನ್ನು ಚುನಾವಣೆಗೆ ಸಿದ್ಧಪಡಿಸಲು ಆವಶ್ಯವಿರುವ ಮತಪತ್ರ ಮತ್ತು ಮತಗಟ್ಟೆಯಲ್ಲಿ ಟೆಂಡರ್ಡ್ ಮತಪತ್ರವಾಗಿ ಉಪಯೋಗಿಸಲು ಆವಶ್ಯವುಳ್ಳ ಮತಪತ್ರಗಳನ್ನು ಮುಖ್ಯ ಚುನಾವಣಾಧಿಕಾರಿಯ ಅನುಮೋದನೆ ಪಡೆದು ಬೆಂಗಳೂರಿನ ಸರಕಾರಿ ಮುದ್ರಣಾಲಯದಲ್ಲಿ ಮುದ್ರಿಸಿಕೊಳ್ಳಲಾಗಿದ್ದು, ಮೇ 2 ರಂದು ಈ ಮುದ್ರಿತ ಮತಪತ್ರವು ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಮಂಗಳೂರು ತಲುಪಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಜ್ಯ ವಿಧಾನ ಸಭೆಗೆ ಮೇ 12ರಂದು ನಡೆಯುವ ಚುನಾವಣೆಯ ಮತ ಎಣಿಕೆಯು ಮೇ 15ರಂದು ಬೋಂದೆಲ್‌ನಲ್ಲಿರುವ ಮಹಾತ್ಮಾಗಾಂಧಿ ಶತಾಬ್ಧಿ ಹಿ.ಪ್ರಾ. ಸರಕಾರಿ ಶಾಲೆ ಮತ್ತು ಸಂಯುಕ್ತ ಕಾಲೇಜಿನಲ್ಲಿ ನಡೆಯಲಿದೆ. ಬೋಂದೆಲ್‌ನ ಶಾಲೆಯಲ್ಲಿ, ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ನಗರ ಉತ್ತರ ಕ್ಷೇತ್ರಕ್ಕೆ ತಲಾ 3 ಭದ್ರತಾ ಕೊಠಡಿ, ತಲಾ 2 ಮತಗಳ ಎಣಿಕೆ ಕೊಠಡಿಯನ್ನು ಕಾಯ್ದಿರಿಸಲಾಗಿದೆಯಲ್ಲದೆ ತಲಾ 14 ಮೇಜುಗಳನ್ನು ಅಳವಡಿಸಲಾಗಿದೆ.
ಬೋಂದೆಲ್‌ನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು ಸುಳ್ಯ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಅದಕ್ಕಾಗಿ 14 ಭದ್ರತಾ ಕೊಠಡಿಗಳು, 8 ಮತ ಎಣಿಕೆ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಸಸಿಕಾಂತ್ ಸೆಂಥಿಲ್ ಹೇಳಿದರು.
ಜಿಲ್ಲೆಯಲ್ಲಿ 380 ಜನಸೇವಾ ಮತದಾರರಿದ್ದು, ಎ. 28ರಂದು ಇಟಿಪಿಬಿಎಸ್ ಮೂಲಕ ಅಂಚೆ ಮತಪತ್ರವನ್ನು ಆಯಾಯ ಚುನಾವಣಾಧಿಕಾರಿಗಳು ರವಾನಿಸಿರುತ್ತಾರೆ. 10,980 ಮತಗಟ್ಟೆ ಅಧಿಕಾರಿಗಳನ್ನು 2ನೆ ಮಿಶ್ರಣದಿಂದ ಜಿಲ್ಲೆಗೆ ನಿಯೋಜಿಸಲ್ಪಟ್ಟ ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯ ಕೋರ್ಟ್ ಹಾಲ್‌ನಲ್ಲಿ ಮತಗಟ್ಟೆ ತಂಡ ರಚಿಸಲಾಗಿದೆ ಎಂದ ಜಿಲ್ಲಾಧಿಕಾರಿ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸಂಬಂಧಿಸಿ ಆನ್‌ಲೈನ್ ಮೂಲಕ ಈವರೆಗೆ 165 ದೂರುಗಳನ್ನು ದಾಖಲಿಸಲಾಗಿದೆ. ಅದನ್ನು ಚುನಾವಣಾ ಆಯೋಗದ ‘ಸಮಧಾನ್’ ಪೋರ್ಟಲ್‌ನಲ್ಲಿ ಅಳವಡಿಸಿ ನಿಯಮಾನುಸಾರ ಪರಿಶೀಲಿಸಿ 160 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. 5 ದೂರುಗಳು ತನಿಖೆಯ ಹಂತದಲ್ಲಿದೆ ಎಂದು ಹೇಳಿದರು.
Comments are closed.