ಕಡಲೂರು: ಪ್ರೇಯಸಿಯ ಕತ್ತು ಕೊಯ್ದ ಪ್ರೇಮಿ, ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಬ್ರೇಕಪ್ ಆದ ಕೋಪದಲ್ಲಿ ಪ್ರೇಮಿ ತನ್ನ ಪ್ರೇಯಸಿಯನ್ನು ಕೊಲ್ಲಲು ಯತ್ನ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಚಿದಂಬರಂನ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ಸೋಮವಾರ ಬೆಳಗ್ಗೆ ಯುವತಿ ಲಾವಣ್ಯ ಕತ್ತಿಗೆ ಚಾಕು ಹಾಕಿ ಕೊಲೆ ಮಾಡಲು ಭಗ್ನ ಪ್ರೇಮಿ ನವೀನ್ ಕುಮಾರ್ ಯತ್ನಿಸಿದ್ದಾನೆ. ಬಳಿಕ ಯುವತಿಯನ್ನು ಕೊಲ್ಲಲು ಯತ್ನಿಸಿದ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ನವೀನ್ ಕುಮಾರ್ನತ್ತ ಕಲ್ಲು ತೂರಿ ಅಟ್ಯಾಕ್ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
23 ವರ್ಷದ ಕೃಷಿ ವಿದ್ಯಾರ್ಥಿನಿ ಲಾವಣ್ಯ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದ ಸ್ಥಿತಿಯಿಂದ ಹೊರಬಂದಿದ್ದಾಳೆ. ಇನ್ನು, 27 ವರ್ಷದ ಇಂಜಿನಿಯರ್ ನವೀನ್ ಕುಮಾರ್ ಆಸ್ಪತ್ರೆಯಿಂದ ಶೀಘ್ರದಲ್ಲೇ ಡಿಸ್ಚಾರ್ಜ್ ಆಗಲಿದ್ದಾನೆ. ವೆಲ್ಲೂರು ಜಿಲ್ಲೆಗೆ ಸೇರಿದ ಯುವಕ ಹಾಗೂ ಯುವತಿ ಇಬ್ಬರೂ 6 ವರ್ಷದಿಂದ ಪರಿಚಿತರಾಗಿದ್ದರು ಎಂದು ತಮಿಳುನಾಡಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ, ಇಬ್ಬರು ಜಗಳವಾಡಿಕೊಂಡಿದ್ದು, ಬಳಿಕ ಯುವತಿ ನವೀನ್ ಜತೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ. ಹಾಗೂ, ಆತನ ಜತೆ ಮಾತನಾಡುವುದನ್ನು ನಿಲ್ಲಿಸಿದ್ದ ಲಾವಣ್ಯ, ಆತನ ಫೋನ್ ಕರೆಗಳನ್ನು ಎತ್ತುತ್ತಿರಲಿಲ್ಲ. ಇದರಿಂದ ಸಿಟ್ಟಾದ ನವೀನ್, ಯುವತಿ ಓದುತ್ತಿದ್ದ ವಿವಿಗೆ ತೆರಳಿ ಆಕೆಯನ್ನು ಭೇಟಿಯಾಗಲು ಮುಂದಾಗಿದ್ದಾನೆ. ಅದರೆ, ಭೇಟಿಗೆ ಇಷ್ಟಪಡದ ಲಾವಣ್ಯ, ಆತನ ಜತೆ ಮಾತನಾಡದೆ ಕ್ಲಾಸಿಗೆ ಹೋಗಲು ಮುಂದಾದಾಗ ಸಿಟ್ಟಾದ ನವೀನ್, ಆಕೆಯ ಕತ್ತಿಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಹಾಗೂ, ಆರೋಪಿ ನವೀನ್ ಆಸ್ಪತ್ರೆಯಿಂದ ಹೊರಬಂದ ತಕ್ಷಣ ಆತನನ್ನು ಕೋರ್ಟ್ಗೆ ಕರೆದೊಯ್ಯುವುದಾಗಿ ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.