ಕರ್ನಾಟಕ

ಐಟಿ ಸಿಟಿಯಲ್ಲಿ ಹೆಚ್ಚಿದ ಸೊಳ್ಳೆ ಕಾಟ

Pinterest LinkedIn Tumblr


ಬೆಂಗಳೂರು: ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಐಟಿ ಸಿಟಿಯಲ್ಲಿ ಸೊಳ್ಳೆಗಳ ಸಂತತಿ ಗಣನೀಯ ಪ್ರಮಾಣದಲ್ಲಿ ಏರಿದೆ. ವೈಟ್‌ಫೀಲ್ಡ್‌ನ ಸಿಟಿಜನ್‌ ಗ್ರೂಪ್‌ ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಇದಕ್ಕೆ ನಗರದ ವಿವಿಧ ಭಾಗದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಭಾಗದಲ್ಲೂ ಸೊಳ್ಳೆಗಳ ಸಂತತಿಯಲ್ಲಿ ಗಣನೀಯ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ.

ಕಳೆದ 2 ವಾರಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆ, ವಿಲೇವಾರಿಯಾಗದ ಘನತ್ಯಾಜ್ಯಗಳಿಂದ ಸೊಳ್ಳೆ ಸಂತತಿ ಹೆಚ್ಚಾಗಿರುವ ಕುರಿತು ಟ್ವಿಟರ್‌ನಲ್ಲಿ ನಗರದ ಅನೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಅನೇಕ ಭಾಗಗಳು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿವೆ. ಇದಲ್ಲದೆ ವೈಟ್‌ಫೀಲ್ಡ್‌, ಎಚ್‌ಎಸ್‌ಆರ್‌ ಲೇಔಟ್‌, ಯಲಚೇನಹಳ್ಳಿ ಸೇರಿದಂತೆ ಅನೇಕ ಭಾಗಗಳಲ್ಲಿ ಒಳಚರಂಡಿ ಮುಚ್ಚುಗೆ ತೆಗೆದು ಹಾಕಲಾಗಿದೆ. ಇವುಗಳು ಸೊಳ್ಳೆ ಉತ್ಪತ್ತಿಯ ಕೇಂದ್ರಗಳಾಗುತ್ತಿವೆ. ಇದಲ್ಲದೆ ಕಳೆದ ಕೆಲವು ದಿನ ಸುರಿದ ಮಳೆಯಿಂದ ತ್ಯಾಜ್ಯಗಳಲ್ಲಿ ನೀರು ಶೇಖರಣೆಯಾಗಿರುವುದು ಸೊಳ್ಳೆ ಸಂತತಿ ಹೆಚ್ಚಲು ಕಾರಣವಾಗುತ್ತಿದೆ ಎಂದು ದೂರಿದ್ದಾರೆ.

“ನಗರದಲ್ಲಿ ಈ ವರೆಗೆ ಸಾಂಕ್ರಾಮಿಕ ರೋಗದ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿಯೂ ಪಾಲಿಕೆಯ ಆರೋಗ್ಯ ವಿಭಾಗ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಪ್ರಕರಣಗಳು ದಾಖಲಾದಲ್ಲಿ ಮಾತ್ರ ಸೊಳ್ಳೆ ನಿಯಂತ್ರಣಕ್ಕೆ ಹೊಗೆ ಹಾಕಲು ಸೂಚಿಸಲಾಗುತ್ತದೆ.” — ಡಾ. ಎಂ.ಎನ್‌. ಲೋಕೇಶ್, ಪಾಲಿಕೆ ಮುಖ್ಯ ಆರೋಗ್ಯ ಅಧಿಕಾರಿ

Comments are closed.