ಕರ್ನಾಟಕ

ನಿಮ್ಮ ಮೊಬೈಲ್‌, ವಾಟ್ಸ್‌ಆ್ಯಪ್‌ ಕನ್ನಡಮಯವಾಗಿಸುವುದು ಹೇಗೆ?

Pinterest LinkedIn Tumblr

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ.


ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಸಮಾನ ಮನಸ್ಕರನ್ನು ಗ್ರೂಪುಗಳ ಮೂಲಕ ಒಂದುಗೂಡಿಸಿ, ವೈಯಕ್ತಿಕ ಸಂಭಾಷಣೆಗಳಿಗಾಗಿ ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಎಂಬ ಕಿರು ಸಾಮಾಜಿಕ ಜಾಲತಾಣ ಬೆಳೆದುಬಂದ ಬಗೆ ಅಗಾಧ. ಅದರ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಅದು ಕೂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಭಾರತದಲ್ಲೇ ಸುಮಾರು 20 ಕೋಟಿಗೂ ಹೆಚ್ಚು ಮಂದಿ ವಾಟ್ಸ್‌ಆ್ಯಪ್‌ನಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅದು ಗ್ರಾಮಾಂತರ ಜನರನ್ನೂ ತಲುಪುತ್ತಿದೆ. ಕೃಷಿ, ಮಾರುಕಟ್ಟೆ ದರ, ಉದ್ಯೋಗ ಇತ್ಯಾದಿ ಸರಕಾರಿ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳು ವಾಟ್ಸ್‌ಆ್ಯಪ್‌ ಸಂದೇಶದ ಮೂಲಕವೇ ಹರಿದಾಡುತ್ತಿವೆ. ಹೀಗಿರುವಾಗ, ಉಳಿದೆಲ್ಲ ಸಂದೇಶವಾಹಕ ಆ್ಯಪ್‌ಗಳ ನಡುವೆ ತನ್ನ ಬಳಕೆದಾರರು ಬೇರೆಡೆ ಹೋಗದಂತೆ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ, ಭಾರತೀಯ ಭಾಷಾ ಓದುಗರ ಅನುಕೂಲಕ್ಕಾಗಿ ಇತ್ತೀಚೆಗೆ ಭಾರತೀಯ ಭಾಷೆಗಳಲ್ಲಿಯೇ ವಾಟ್ಸ್‌ಆ್ಯಪ್‌ ಸೇವೆಯನ್ನು ನೀಡಲಾರಂಭಿಸಿದೆ. ಅಂದರೆ, ಇದುವರೆಗೆ ಇಂಗ್ಲಿಷಿನಲ್ಲಿರುವ ವಾಟ್ಸ್‌ಆ್ಯಪ್‌ ಆ್ಯಪ್‌ನ ಮೆನು, ಸೆಟ್ಟಿಂಗ್ಸ್‌ ಇತ್ಯಾದಿ ಮಾಹಿತಿಗಳು, ಈಗ ಕನ್ನಡದಲ್ಲೂ ದೊರೆಯುತ್ತಿವೆ. ಇದನ್ನು ಸೆಟ್‌ ಮಾಡಿಕೊಳ್ಳುವುದು ಕೂಡ ಸುಲಭ.

ಮೊದಲು ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳಿ
ಮೊದಲು ನೀವು ಮಾಡಬೇಕಾದ ಕೆಲಸವೆಂದರೆ, ನಿಮ್ಮ ಸ್ಮಾರ್ಟ್‌ ಫೋನ್‌ನಲ್ಲಿರುವ ವಾಟ್ಸ್‌ಆ್ಯಪ್‌ ಮೆಸೆಂಜರ್‌ ಆ್ಯಪ್‌ ಅನ್ನು ಹೊಸ ಆವೃತ್ತಿಗೆ ಅಪ್‌ಡೇಟ್‌ ಮಾಡಿಕೊಳ್ಳುವುದು. ಇಂಟರ್ನೆಟ್‌ ಆನ್‌ ಮಾಡಿಕೊಂಡು, ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ, ಎಡ ಮೇಲ್ಭಾಗದಲ್ಲಿರುವ ಮೂರು ಅಡ್ಡಗೆರೆ ಸ್ಪರ್ಶಿಸಿದಾಗ ಕಾಣಿಸಿಕೊಳ್ಳುವ ಮೆನುವಿನಿಂದ ‘ಮೈ ಆ್ಯಫ್ಸ್‌ ಆ್ಯಂಡ್‌ ಗೇಮ್ಸ…’ ಒತ್ತಿಬಿಡಿ. ಆಗ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವಿಭಿನ್ನ ಆ್ಯಪ್‌ಗಳಿಗೆ ‘ಅಪ್‌ಡೇಟ್‌’ (ಅಂದರೆ ಅವುಗಳ ಪರಿಷ್ಕೃತ ಆವೃತ್ತಿ) ಲಭ್ಯವಿದೆಯೇ ಎಂದು ಫೋನ್‌ ತಾನಾಗಿ ಪರೀಕ್ಷಿಸುತ್ತದೆ. ಪರಿಷ್ಕೃತ ಆವೃತ್ತಿ ಇರುವ ಆ್ಯಪ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ಇಂಟರ್ನೆಟ್‌ ಡೇಟಾ ಪ್ಯಾಕೇಜ್‌ ಇದ್ದರೆ, ‘ಅಪ್‌ಡೇಟ್‌ ಆಲ್‌’ ಒತ್ತಿಬಿಡಿ. ಇಲ್ಲವೆಂದಾದರೆ ನಿಮಗೆ ಬೇಕಾದ ಆ್ಯಪ್‌ ಮಾತ್ರ ಅಪ್ಡೇಟ್‌ ಮಾಡಿಕೊಳ್ಳಬಹುದು. ಈ ಮೂಲಕ ವಾಟ್ಸಾಪ್‌ ಅಪ್ಡೇಟ್‌ ಮಾಡಿಕೊಳ್ಳಿ.

ಕನ್ನಡ ಸೆಟ್‌ ಮಾಡಿಕೊಳ್ಳುವುದು

ಲೇಟೆಸ್ಟ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿದ ಬಳಿಕ ವಾಟ್ಸ್‌ಆ್ಯಪ್‌ ಓಪನ್‌ ಮಾಡಿ. ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಬಟನ್‌ ಒತ್ತಿದಾಗ ಅದರ ಮೆನುಗಳು ಕಾಣಿಸುತ್ತವೆ. ‘ಸೆಟ್ಟಿಂಗ್ಸ್‌’ನಲ್ಲಿ ‘ಚಾಟ್ಸ್‌’ ಒತ್ತಿ. ಮೇಲ್ಭಾಗದಲ್ಲಿ ‘ಆ್ಯಪ್‌ ಲ್ಯಾಂಗ್ವೇಜ್‌’ ಅಂತ ಇರುವುದನ್ನು ಒತ್ತಿ. ಆಗ ಭಾರತದ ವಿವಿಧ ಭಾಷೆಗಳ ಆಯ್ಕೆಗಳು ಗೋಚರಿಸುತ್ತದೆ. ಕನ್ನಡ ಆಯ್ಕೆ ಮಾಡಿಕೊಂಡರಾಯಿತು. ಸರ್ವಂ ಕನ್ನಡಮಯಂ!

ಸದ್ಯಕ್ಕೆ ಕನ್ನಡ ಮಾತ್ರವಲ್ಲದೆ ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ ಹಾಗೂ ಮಲಯಾಳಂ ಸಹಿತ 10 ಭಾಷೆಗಳಲ್ಲಿ ವಾಟ್ಸ್‌ಆ್ಯಪ್‌ ಲಭ್ಯವಿದೆ. ಆದರೆ, ಒಂದು ವಿಚಾರ ಗಮನಿಸಿ. ಇತ್ತೀಚಿನ ಮೊಬೈಲ್‌ ಹ್ಯಾಂಡ್‌ಸೆಟ್‌ಗಳು ಕೂಡ ಎಲ್ಲವನ್ನೂ ಕನ್ನಡ ಸಹಿತ ಪ್ರಮುಖ ಭಾರತೀಯ ಭಾಷೆಗಳಲ್ಲೇ ತೋರಿಸುವ ಆಯ್ಕೆಯನ್ನು ನೀಡುತ್ತಿವೆ. ಹೆಚ್ಚಿನವರು ಗಮನಿಸಿರಬಹುದು. ಈಗಾಗಲೇ ನಿಮ್ಮ ಹ್ಯಾಂಡ್‌ಸೆಟ್‌ನ ಯೂಸರ್‌ ಇಂಟರ್ಫೇಸ್‌ (ಯುಐ) ಅಂದರೆ ಎಲ್ಲ ಮೆನು, ಸೆಟ್ಟಿಂಗ್ಸ್‌ಗಳು, ಡಿಸ್‌ಪ್ಲೇ ಆಗುವ ಭಾಷೆ ಕನ್ನಡ ಆಗಿದ್ದರೆ, ವಾಟ್ಸ್‌ಆ್ಯಪ್‌ನಲ್ಲಿ ಪ್ರತ್ಯೇಕವಾಗಿ ಮೇಲೆ ಹೇಳಿದ ಸೆಟ್ಟಿಂಗ್‌ ಮಾಡಿಕೊಳ್ಳಬೇಕಾಗಿಲ್ಲ. ಅದು ಕೂಡ ಸ್ವಯಂಚಾಲಿತವಾಗಿ ಕನ್ನಡದಲ್ಲೇ ಕಾಣಿಸುತ್ತದೆ.

ಹ್ಯಾಂಡ್‌ಸೆಟ್‌ನ್ನೇ ಕನ್ನಡಕ್ಕೆ ಬದಲಾಯಿಸಿ

ನಿಮ್ಮ ಇಡೀ ಹ್ಯಾಂಡ್‌ಸೆಟ್‌ನ್ನೇ ಕನ್ನಡದಲ್ಲೇ ನೋಡಲು ಮತ್ತು ಕನ್ನಡದಲ್ಲೇ ಉಪಯೋಗಿಸಲು ಬದಲಾಯಿಸಿಕೊಳ್ಳಬೇಕೆಂದಿದ್ದರೆ, ಅದಕ್ಕಾಗಿ ನೀವು ಅನುಸರಿಸಬೇಕಾದ ಹಂತಗಳು ಇಂತಿವೆ:

ಆಂಡ್ರಾಯ್ಡ್‌ ಮೊಬೈಲ್‌ ಹ್ಯಾಂಡ್‌ಸೆಟ್‌ನ ಸೆಟ್ಟಿಂಗ್ಸ್‌ ಆ್ಯಪ್‌ ತೆರೆಯಿರಿ. ಇಲ್ಲವೇ, ಹೋಂ ಸ್ಕ್ರೀನ್‌ ಮೇಲ್ಭಾಗದಿಂದ ಕೆಳಕ್ಕೆ ಬೆರಳಿನಿಂದ ಸ್ವೈಪ್‌ ಮಾಡಿದಾಗ, ‘ಗೇರ್‌’ ಐಕಾನ್‌ ಕಾಣಿಸುತ್ತದೆ. ಅದನ್ನು ಒತ್ತಿ. ಅದು ನೇರವಾಗಿ ಸೆಟ್ಟಿಂಗ್ಸ್‌ ಮೆನುವನ್ನು ತೋರಿಸುತ್ತದೆ. ಇತ್ತೀಚಿನ ತಂತ್ರಾಂಶವಿರುವ ಫೋನ್‌ ಆಗಿದ್ದರೆ ‘ಜನರಲ್‌ ಮ್ಯಾನೇಜ್‌ಮೆಂಟ್‌’ ಎಂಬುದನ್ನು ಕ್ಲಿಕ್‌ ಮಾಡಬೇಕು. ಇಲ್ಲವೆಂದಾದರೆ, ‘ಲ್ಯಾಂಗ್ವೇಜ್‌ ಆ್ಯಂಡ್‌ ಇನ್‌ಪುಟ್‌’ ಅಂತ ಸರ್ಚ್‌ ಬಟನ್‌ ಮೂಲಕ ನೇರವಾಗಿ ಹುಡುಕಲೂಬಹುದು. ‘ಲ್ಯಾಂಗ್ವೇಜ್‌ ಆ್ಯಂಡ್‌ ಇನ್‌ಪುಟ್‌’ ಒತ್ತಿದಾಗ, ಮೊದಲು ಕಾಣಿಸುವ ಬಟನ್‌ ಒತ್ತಿ. ಅಲ್ಲಿ ಡೀಫಾಲ್ಟ… ಇಂಗ್ಲಿಷ್‌ ಇರುತ್ತದೆ. ಕೆಲವು ಫೋನ್‌ಗಳಲ್ಲಿ ಲಭ್ಯವಿರುವ ಭಾಷೆಗಳ ಪಟ್ಟಿ ನೇರವಾಗಿ ಕಾಣಿಸುತ್ತದೆ. ಇತ್ತೀಚಿನ ಆವೃತ್ತಿಗಳಲ್ಲಾದರೆ, ‘ಆ್ಯಡ್‌ ಲ್ಯಾಂಗ್ವೇಜ್‌’ ಎಂಬ ಬಟನ್‌ ಒತ್ತಬೇಕಾಗುತ್ತದೆ. ಅಲ್ಲಿ ಕನ್ನಡ ಆಯ್ದುಕೊಳ್ಳಿ.

ಆರಂಭದಲ್ಲಿ ಇಡೀ ಫೋನ್‌ಗೆ ಆ ಭಾಷೆ ಅನ್ವಯವಾಗಬೇಕಾಗಿರುವುದರಿಂದ ಫೋನ್‌ ಕೆಲವು ಕ್ಷ ಣ ನಿಧಾನವಾದಂಥ ಅನುಭವವಾಗಬಹುದು. ಇದು ಆರಂಭದಲ್ಲಿ ಒಂದು ಬಾರಿಗೆ ಮಾತ್ರ. ನಂತರ ಫೋನ್‌ ವೇಗವಾಗಿಯೇ ಕಾರ್ಯಾಚರಿಸುತ್ತದೆ.

ಕನ್ನಡ ಕೀಬೋರ್ಡ್‌

ಬಹುತೇಕ ಎಲ್ಲ ಮೊಬೈಲ್‌ ತಯಾರಿಕಾ ಕಂಪನಿಗಳು ಭಾರತೀಯರ ಮನಸ್ಸುಗಳಿಗೆ ಸ್ಪಂದಿಸುತ್ತಿವೆ. ಆಯಾ ಭಾಷೆಗಳಲ್ಲಿ ಸೇವೆ ನೀಡದಿದ್ದರೆ, ಮಾರುಕಟ್ಟೆಯಲ್ಲಿಯೂ ಉಳಿಗಾಲವಿಲ್ಲ ಎಂಬುದು ಬಹುತೇಕ ಎಲ್ಲ ಕಂಪನಿಗಳಿಗೂ ಅರಿವಾಗಿವೆ. ಇಂಟರ್ನೆಟ್‌ ಜಗತ್ತಿನಲ್ಲಿ ಕೂಡ ಈಗಂತೂ ಇಂಗ್ಲಿಷ್‌ ಮಾತ್ರವೇ ಅಲ್ಲ, ಭಾರತೀಯ ಭಾಷೆಗಳೇ ಪ್ರಧಾನ ಪಾತ್ರವಹಿಸಲಿವೆ ಎಂಬುದು ಸಾಕಷ್ಟು ಸಮೀಕ್ಷೆಗಳಿಂದಲೂ ದೃಢಪಟ್ಟಿದೆ. ಹೀಗಿರುವಾಗ ಯೂಸರ್‌ ಇಂಟರ್ಫೇಸ್‌ ಮಾತ್ರವಲ್ಲದೆ, ಅದರಲ್ಲೇ ಟೈಪ್‌ ಮಾಡಲು ಅನುವಾಗುವಂತೆ ಕೀಬೋರ್ಡ್‌ಗಳನ್ನೂ ಅಳವಡಿಸಿಯೇ ನೀಡುತ್ತಿವೆ. ಅದನ್ನು ಎನೇಬಲ್‌ ಮಾಡಿಕೊಳ್ಳಲು ನಮಗೆ ತಿಳಿದಿರಬೇಕಷ್ಟೆ. ಈ ಕೀಬೋರ್ಡ್‌ ಕನ್ನಡದದ್ದಾದರೂ, ಅದನ್ನು ಇನ್‌ಪುಟ್‌ ಮಾಡುವ ವಿಧಾನಗಳು ಬೇರೆಬೇರೆ ಇರುತ್ತವೆ. ಉದಾಹರಣೆಗೆ, ನುಡಿ, ಬರಹ, ಕೆ.ಪಿ.ರಾವ್‌, ಇನ್‌ಸ್ಕ್ರಿಪ್ಟ್‌ ಅಂತೆಲ್ಲ ಕೇಳಿರಬಹುದು. ಗೊಂದಲವಿದ್ದವರು ಜಸ್ಟ್‌ ಕನ್ನಡ ಎಂಬ ಅನುಕೂಲಕರ ಕೀಬೋರ್ಡ್‌ (ಇಂಗ್ಲಿಷ್‌ನಲ್ಲಿಂತೆಯೇ ಟೈಪ್‌ ಮಾಡಿದರೆ ಕನ್ನಡ ಅಕ್ಷ ರಗಳು ಮೂಡುತ್ತವೆ) ಅಳವಡಿಸಿಕೊಂಡು ಎನೇಬಲ್‌ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಸಾಕಷ್ಟು ಕನ್ನಡ ಟೈಪಿಂಗ್‌ ಕೀಲಿಮಣೆಗಳ ಆ್ಯಪ್‌ಗಳು ದೊರೆಯುತ್ತವೆ. ಇಷ್ಟು ಮಾಡಿಕೊಂಡರೆ, ಇಡೀ ಫೋನ್‌ ಕನ್ನಡಮಯವಾಗಿಬಿಡುತ್ತದೆ.

****

ಟೆಕ್‌ಟಾನಿಕ್: ಸಂದೇಶ ಡಿಲೀಟ್ ಅವಧಿ ವಿಸ್ತರಣೆ
ವಾಟ್ಸಾಪ್ ಬಳಸುತ್ತಿರುವವರಿಗೆ ಇತ್ತೀಚೆಗೆ ಅದು ಪರಿಚಯಿಸಿದ ‘ಡಿಲೀಟ್’ ಆಯ್ಕೆ ಬಗ್ಗೆ ಗೊತ್ತಿದೆ. ನಾವೇನಾದರೂ ತಪ್ಪು ಸಂದೇಶವನ್ನು ಕಳುಹಿಸಿದರೆ, ಅಥವಾ ತಪ್ಪಾದ ಗ್ರೂಪುಗಳಿಗೆ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಏಳು ನಿಮಿಷಗಳೊಳಗೆ ಡಿಲೀಟ್ ಮಾಡುವ ಆಯ್ಕೆ ನೀಡಲಾಗಿತ್ತು. ಅದರ ಜನಪ್ರಿಯತೆಯನ್ನು ಮನಗಂಡ ವಾಟ್ಸಾಪ್, ಡಿಲೀಟ್ ಮಾಡಬಹುದಾದ ಅವಧಿಯನ್ನು ವಿಸ್ತರಿಸಿದೆ. ಅಂದರೆ, ಬೇರೆಯವರು ನೋಡುವ ಮುನ್ನ ಇದುವರೆಗೆ 420 ಸೆಕೆಂಡುಗಳೊಳಗೆ ನಾವು ಡಿಲೀಟ್ ಮಾಡಿದ್ದರೆ ಅದನ್ನು ಮುಂದೆ ಯಾರೂ ನೋಡುವುದು ಸಾಧ್ಯವಿರಲಿಲ್ಲ. ಈಗಿನ ಪ್ರಕಾರ, ಈ ಅವಧಿಯನ್ನು ವಾಟ್ಸಾಪ್ 4096 ಸೆಕೆಂಡಿಗೆ ವಿಸ್ತರಿಸಿದೆ. ಅಂದರೆ 68 ನಿಮಿಷ 16 ಸೆಕೆಂಡುಗಳವರೆಗೂ ನೀವು ‘ಡಿಲೀಟ್ ಫಾರ್ ಎವ್ರಿವನ್’ ಎಂಬ ಬಟನ್ ಕ್ಲಿಕ್ ಮಾಡಬಹುದು. ಆ ಬಳಿಕ ಡಿಲೀಟ್ ಮಾಡಲಾಗದು. ಅಷ್ಟರೊಳಗೆ ಯಾರಾದರೂ ಅದನ್ನು ಓದಿದ್ದರೆ ತಪ್ಪು ಬರೆದಿರುವುದಕ್ಕೆ/ಫಾರ್ವರ್ಡ್ ಮಾಡಿರುವುದಕ್ಕೆ ಕ್ಷಮೆ ಇಲ್ಲ!

Comments are closed.