ಕ್ರೀಡೆ

ಮುಂಬೈ ಇಂಡಿಯನ್ಸ್ ವಿರುದ್ಧ ಮಿಂಚಿದ ಬೌಲರ್‌ಗಳು: ಆರ್‌ಸಿಬಿಗೆ 14 ರನ್ ಗಳ ಜಯ

Pinterest LinkedIn Tumblr

ಬೆಂಗಳೂರು: ಮೇ.1 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಆರ್ ಸಿಬಿಗೆ 14 ರನ್ ಗಳ ಜಯ ದೊರೆತಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ನ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಎಡಿಬಿ ಅನುಪಸ್ಥಿತಿಯಲ್ಲಿ ಮನನ್ ವೋಹ್ರಾ (31 ಎಸೆತಗಳಲ್ಲಿ 45 ರನ್), ವಿರಾಟ್ ಕೊಹ್ಲಿ 26 ಎಸೆತಗಳಲ್ಲಿ 32 ರನ್, ಬ್ರೆಂಡನ್ ಮೆಕಾಲಮ್- 37 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತವನ್ನು ದಾಖಲಿಸಲು ನೆರವಾದರು.

ಆರ್ ಸಿಬಿ ನೀಡಿದ ಟಾರ್ಗೆಟ್ ನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಆರ್ ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಕ್ರಮಾಂಕದ ಆಟಗಾರರು, ರೋಹಿತ್ ಶರ್ಮಾ ಸೇರಿದಂತೆ ಭರವಸೆಯ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರೆ, ಜೆಪಿ ಡ್ಯುಮಿನಿ 29 ಎಸೆತಗಳಲ್ಲಿ 23 ರನ್ ಹಾಗೂ ಹಾರ್ದಿಕ್ ಪಾಂಡ್ಯ 42 ಎಸೆತಗಳಲ್ಲಿ 50 ರನ್ ಗಳಿಸಿ ಆರ್ ಸಿಬಿಯನ್ನು ಎದುರಿಸಲು ಯತ್ನಿಸಿದರಾದರೂ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಎಸೆತ ಒಂದು; 13 ರನ್‌ ಕೊಳ್ಳೆ ಹೊಡೆದ ಮೆಕ್ಲಮ್‌!
ಬ್ರೆಂಡನ್ ಮೆಕ್ಲಮ್ ಅವರು ಒಂದೇ ಎಸೆತದಲ್ಲಿ 13 ರನ್‌ಗಳನ್ನು ಕೊಳ್ಳೆ ಹೊಡೆದ ದಾಖಲೆ ಮಾಡಿದರು. ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಹಾಕಿದ್ದ ಎಸೆತವನ್ನು ಸಿಕ್ಸರ್‌ಗೆ ಎತ್ತಿದರು. ಆ ಎಸೆತವು ನೋಬಾಲ್ ಆಗಿದ್ದರಿಂದ ಫ್ರೀ ಹಿಟ್ ದೊರೆಯಿತು.

ಆಗ ಹಾರ್ದಿಕ್ ಹಾಕಿದ ನೇರ ಫುಲ್ ಟಾಸ್ ಎಸೆತವನ್ನು ರಿವರ್ಸ್‌ ಸ್ಕೂಪ್ ಮೂಲಕ ಸಿಕ್ಸರ್‌ಗೆ ಎತ್ತಿದರು. ವಿಕೆಟ್‌ಕೀಪರ್ ತಲೆಮೇಲಿಂದ ಸಾಗಿದ ಚೆಂಡು ಹಿಂಬದಿಯ ಸ್ಕ್ರೀನ್‌ಗೆ ಹೋಗಿ ಬಿತ್ತು. ನೋಬಾಲ್‌ನ ಒಂದು ರನ್ ಮತ್ತು ಎರಡು ಸಿಕ್ಸರ್‌ಗಳು ತಂಡದ ಖಾತೆಗೆ ಸೇರಿದವು.

Comments are closed.