ಕರ್ನಾಟಕ

ಕಾಣೆಯಾಗಿದ್ದ ರೇಷ್ಮೆ ಸೀರೆ ಮಳಿಗೆಗೆ ತಲುಪಿಸಿದ ದಂಪತಿ

Pinterest LinkedIn Tumblr


ಬೆಂಗಳೂರು: ರೋಡಲ್ಲಿ 10 ರೂ. ಕಂಡರೂ ಜೇಬಿಗೆ ಹಾಕಿಕೊಳ್ಳುವ ಕಾಲದಲ್ಲಿ ದಾರಿ ಮಧ್ಯೆ ಬಿದ್ದಿದ್ದ 25 ಸಾವಿರದ ರೇಷ್ಮೆ ಸೀರೆಯನ್ನು ದಂಪತಿ ಮಾಲಿಕರಿಗೆ ಹಿಂದಿರುಗಿಸಿದ್ದಾರೆ.
ಜಯನಗರ 4 ನೇ ಬ್ಲಾಕ್‌ನ ರಸ್ತೆಯಲ್ಲಿ ಬಿದ್ದಿದ್ದ ಕಾಂಚೀವರಂ ರೇಷ್ಮೆ ಸೀರೆ ವಿಶ್ವನಾಥ್‌ ಹಾಗೂ ಅನಿತಾಗೆ ಸಿಕ್ಕಿದೆ. 25 ಸಾವಿರ ರೂ. ಬೆಲೆಯ ಪ್ರೈಸ್‌ ಟ್ಯಾಗ್‌ ಇದ್ದ ಕಾಸ್ಟ್ಲಿ ಸೀರೆ ಯಾರಿಗೆ ಸೇರಿದ್ದು, ಯಾವ ಸೀರೆ ಮಳಿಗೆಗೆ ಸೇರಿದ್ದು ಎಂದು ತಿಳಿಯಲು ದಂಪತಿ ಹರಸಾಹಸ ಪಟ್ಟಿದ್ದಾರೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸೀರೆಯ ಮಾಲಿಕರನ್ನು ಹುಡುಕಲು ವ್ಯಯ ಮಾಡಿದ ವಿಶ್ವನಾಥ್‌ ಹಾಗೂ ಅನಿತಾ, ಸೀರೆ ಮಾಲಿಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆ ಮನೆಯಿಂದ ಸೀರೆ ವಧುವಿನ ಕೈತಪ್ಪಿದೆಯೇ, ಹೊಸ ಸೀರೆ ಖರೀದಿಸಿ ತೆರಳುವ ವೇಳೆ ಮಾರ್ಗದಲ್ಲಿ ಬಿದ್ದಿದೆಯೇ ಎಂಬಿತ್ಯಾದಿ ಗೊಂದಲಗಳಿಂದ ವಿಶ್ವನಾಥ್‌ ಹಾಗೂ ಅನಿತಾ ಕೆಲ ಕಾಲ ಸೀರೆಯ ವಾರಸುದಾರರಿಗಾಗಿ ಹುಡುಕಾಡಿದ್ದಾರೆ. ಅಷ್ಟು ಸಾಲದೆಂದು ಫೇಸ್‌ಬುಕ್‌ಗೂ ಸೀರೆ ಸಿಕ್ಕಿದೆ ಎಂದು ಪೋಸ್ಟ್‌ ಮಾಡಿದ್ದಾರೆ. ಆದರೆ ಯಾರಿಂದಲೂ ನೊ ರೆಸ್ಪಾಂಸ್. ಸೀರೆ ಹಿಡಿದು ಆಸುಪಾಸಿನ ಸೀರೆ ಮಳಿಗೆಯಲ್ಲೂ ಈ ಸೀರೆ ಬಗ್ಗೆ ವಿಚಾರಿಸಿದ್ದಾರೆ.

ಪ್ರೈಸ್‌ ಟ್ಯಾಗ್‌ನಲ್ಲಿದ್ದ ಬಾರ್‌ಕೋಡ್‌ನ್ನು ಮೊಬೈಲ್‌ ಮೂಲಕ ಅನಿತಾ ಸ್ಕ್ಯಾನ್‌ ಮಾಡಿದರು. ಇದರ ಜತೆಯಲ್ಲಿ ಹತ್ತಿರದ ಪ್ರೀಮಿಯರ್‌ ಸಿಲ್ಕ್‌ ಸಾರಿ ಶೋರೂಂಗೆ ಭೇಟಿ ನೀಡಿ, ಸೀರೆ ಬಗ್ಗೆ ಕೇಳಿದಾಗ ಅಸಲಿ ಮಾಲಿಕರು ಸಿಕ್ಕಿದ್ದಾರೆ. ಜೆಪಿ ನಗರ ಮಳಿಗೆಯಿಂದ ಜಯನಗರದ ಮಳಿಗೆಗೆ ಒಟ್ಟು 18 ಸೀರೆಗಳನ್ನು ಸಾಗಿಸಲಾಗಿತ್ತು. ಆದರೆ 17 ಸೀರೆಗಳಷ್ಟೇ ಇದ್ದವು. ಸಾಗಾಣಿಕೆ ವೇಳೆ ಒಂದು ಸೀರೆ ಬಿದ್ದಿರುವುದಾಗಿ ಮಳಿಗೆ ಮಾಲಿಕರು ತಿಳಿಸಿದ್ದಾರೆ. ಸೀರೆಗಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಯ ವ್ಯಯ ಮಾಡಿದ ದಂಪತಿಗಳಿಗೆ ಮಾಲಕರು ಕೃತಜ್ಞತೆ ಸಲ್ಲಿಸಿದ್ದಾರೆ. ವಿಶ್ವನಾಥ್‌ ಹಾಗೂ ಅನಿತಾರಿಂದ ಮಳಿಗೆಯ ಕೆಲ ನೌಕರರ ಉದ್ಯೋಗ ಉಳಿದಿದೆ ಎಂದು ಮಳಿಗೆಯ ವ್ಯವಸ್ಥಾಪಕ ಹೇಳಿದ್ದಾರೆ.

Comments are closed.