ರಾಷ್ಟ್ರೀಯ

2019ರ ಚುನಾವಣೆಗೆ ಬಿಜೆಪಿ ಬತ್ತಳಿಕೆಯಲ್ಲಿ ರೆಡಿಯಾಗ್ತಿದೆ ‘ಬ್ರಹ್ಮಾಸ್ತ್ರ’

Pinterest LinkedIn Tumblr


ವಾರಾಣಸಿ: ಉತ್ತರ ಪ್ರದೇಶದಲ್ಲಿ 2019ರ ಲೋಕಸಭಾ ಚುನಾವಣೆ ವೇಳೆಗೆ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಮೈತ್ರಿಯ ಓಟಕ್ಕೆ ತಡೆಯೊಡ್ಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರ ‘ಬ್ರಹ್ಮಾಸ್ತ್ರ’ವೊಂದನ್ನು ಸಿದ್ಧಪಡಿಸುತ್ತಿದೆ.

ರಾಜ್ಯದ 82 ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೂರು ವಿಭಾಗಗಳಲ್ಲಿ ವರ್ಗೀಕರಿಸಿ, ಮಂಡಲ್‌ ಆಯೋಗದ ಶಿಫಾರಸಿನಂತೆ ಶೇ 27ರ ಮೀಸಲಾತಿಯಲ್ಲಿ ಮೂರೂ ವಿಭಾಗಗಳಿಗೆ ಸರಿಯಾದ ಪಾಲು ನೀಡಲು ಸರಕಾರ ಮುಂದಾಗಿದೆ ಎಂದು ಹಿರಿಯ ಸಂಪುಟ ಸಚಿವ ಓ.ಪಿ ರಾಜ್‌ಭರ್ ತಿಳಿಸಿದರು.

ಬಿಜೆಪಿಯ ಈ ‘ಬ್ರಹ್ಮಾಸ್ತ್ರ’ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟವನ್ನು ಛಿದ್ರಗೊಳಿಸುವ ಸಾಧ್ಯತೆಯಿದೆ.

‘ರಾಜ್ಯದ 82 ಒಬಿಸಿಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ಶೇ 27ರ ಮೀಸಲಾತಿಯನ್ನು ಸೂಕ್ತವಾಗಿ ಹಂಚುವ ಯೋಜನೆ ಇದಾಗಿದೆ. 2019ರ ಲೋಕಸಭಾ ಚುನಾವಣೆಗೆ 6 ತಿಂಗಳ ಮೊದಲೇ ಈ ಬ್ರಹ್ಮಾಸ್ತ್ರವನ್ನು ಬಿಜೆಪಿ ಬತ್ತಳಿಕೆಯಿಂದ ಹೊರ ಬಿಡಲಿದೆ’ ಎಂದು ಬಲಿಯಾ ಕ್ಷೇತ್ರದ ರಸಾರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಅವರು ತಿಳಿಸಿದರು.

ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರ ಸಮೀಕರಣದ ಮೂಲ ಎಸ್‌ಪಿ-ಬಿಎಸ್‌ಪಿ ವೋಟ್‌ ಬ್ಯಾಂಕ್ ಅನ್ನು ಒಡೆಯಲು ಬಿಜೆಪಿ ತಂತ್ರ ಹೆಣೆದಿದೆ.

ಶೇ 27ರ ಮೀಸಲಾತಿಯನ್ನು ಮೂರು ವಿಭಾಗಗಳಲ್ಲಿ ಹಂಚಲಾಗುತ್ತದೆ. ನಾಲ್ಕು ಜಾತಿಗಳ ಹಿಂದುಳಿದ ವರ್ಗ (ಪಿಛಡಾ), 19 ಜಾತಿಗಳ ಅತಿ ಹಿಂದುಳಿದ ವರ್ಗ (ಅತಿ ಪಿಛಡಾ) ಮತ್ತು 59 ಜಾತಿಗಳನ್ನು ಒಳಗೊಂಡ ಅತ್ಯಂತ ಹಿಂದುಳಿದ (ಸರ್ವಾಧಿಕ್‌ ಪಿಛಡಾ) ಗುಂಪುಗಳೆಂದು ವಿಂಗಡಿಸಲಾಗುತ್ತದೆ. ಈ ಸೂತ್ರ ಜಾರಿಯಾದರೆ, ಸಮಾಜವಾದಿ ಪಕ್ಷದ ಮೂಲ ಬೆಂಬಲಿಗರಾದ ಯಾದವರ ಪ್ರಾಬಲ್ಯ ಕೊನೆಗೊಳ್ಳುತ್ತದೆ. ರಾಜಕೀಯವಾಗಿ ಮತ್ತು ಒಬಿಸಿ ಕೋಟಾದಲ್ಲಿ ಆಂತರಿಕವಾಗಿ ಯಾದವರ ಪ್ರಾಬಲ್ಯಕ್ಕೆ ಪೆಟ್ಟು ಬಿದ್ದರೆ ಎಸ್‌ಪಿ-ಬಿಎಸ್‌ಪಿ ಮೈತ್ರಿಗೆ ಗಂಭೀರ ಹೊಡೆತ ಬೀಳಲಿದೆ.

ಓಬಿಸಿ ಸಬಲೀಕರಣದಿಂದ ಅತಿ ಹೆಚ್ಚು ಲಾಭ ಪಡೆದವರು ಯಾದವರಾಗಿದ್ದು, ಇತರ ಹಿಂದುಳಿದ ಪಂಗಡಗಳು ಇದರಿಂದ ತೀವ್ರ ಆಕ್ರೋಶಗೊಂಡಿವೆ. ಈ ಆಕ್ರೋಶದ ಲಾಭವನ್ನು 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಡೆದುಕೊಂಡಿತು.

ಹೀನಾಯ ಸೋಲಿನಿಂದ ಕಂಗೆಟ್ಟ ಎಸ್‌ಪಿ ಮತ್ತು ಬಿಎಸ್‌ಪಿ ಪರಸ್ಪರ ಮೈತ್ರಿ ಮೂಲಕ ಕಳೆದುಕೊಂಡ ನೆಲೆಯನ್ನು ಮರಳಿ ಪಡೆಯಲು ಹವಣಿಸುತ್ತಿವೆ. ಯಾದವೇತರ ಒಬಿಸಿ ಗುಂಪುಗಳನ್ನು ಬಿಜೆಪಿ ಒಲಿಸಿಕೊಂಡಿದ್ದೇ ಅದರ ಸತತ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

‘ಫೂಲ್‌ಪುರ ಮತ್ತು ಗೋರಖ್‌ಪುರ ಲೋಕಸಭಾ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬಿಎಸ್‌ಪಿ ನೆರವಾಯಿತು. ಆ ಮೂಲಕ ಬಿಜೆಪಿ ಗೆಲುವಿನ ಓಟಕ್ಕೆ ತಡೆ ಹಾಕುವ ವಿರೋಧಿಗಳ ಯತ್ನ ಭಾಗಶಃ ಯಶಸ್ವಿಯಾಯಿತು. ಇದೇ ಸಮೀಕರಣ ಮುಂದಿನ ಚುನಾವಣೆಗಳಲ್ಲೂ ಕಾಣಿಸಿಕೊಳ್ಳಲಿದೆ. ಇದುವರೆಗೂ ಈ ಜಾತಿಗಳು ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಮುಷ್ಠಿಯೊಳಗಿದ್ದವು. ಆದರೆ ಈಗ ನಮ್ಮ ಆಟದ ಸರದಿ’ ಎಂದು ರಾಜ್‌ಭರ್‌ ತಿಳಿಸಿದರು.

Comments are closed.