ಮನೋರಂಜನೆ

ಶಿಷ್ಟಾಚಾರದಲ್ಲಿ ಬದಲಾವಣೆಗೆ ವಿರೋಧ ; ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ಗೈರಾದ 70ಕ್ಕೂ ಹೆಚ್ಚು ವಿಜೇತರು !

Pinterest LinkedIn Tumblr

ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಸಮಾರಂಭ ನಗರದ ವಿಜ್ಞಾನ ಭವನದಲ್ಲಿ ನಡೆದಿದ್ದು, 70ಕ್ಕೂ ಹೆಚ್ಚು ವಿಜೇತರು ಗೈರಾಗಿದ್ದಾರೆ. ರಾಷ್ಟ್ರಪತಿ ಕೇವಲ 11 ಮಂದಿಗೆ ಮಾತ್ರ ಪ್ರಶಸ್ತಿ ವಿತರಿಸಲಿದ್ದು, ಉಳಿದ ಸಾಧಕರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ ಎಂದು ನಿನ್ನೆ (ಬುಧವಾರ) ಸಂಜೆ ತಿಳಿಸಲಾಗಿತ್ತು. ಇದು ಪ್ರಶಸ್ತಿ ವಿಜೇತರಿಗೆ ಇರಿಸುಮುರಿಸು ಉಂಟುಮಾಡಿತ್ತು.

‘ನಮ್ಮ ಸಾಧನೆಗಾಗಿ ನಮ್ಮನ್ನು ಗೌರವಿಸಲಾಗುತ್ತಿದೆ ಎಂದು ನಮಗೆ ಅನಿಸುತ್ತಿಲ್ಲ. ತುಂಬಾ ಬೇಸರವಾಗುತ್ತಿದೆ’ ಎಂದು ರಾಷ್ಟ್ರಪತಿಗಳನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ಕಲಾವಿದರು ಹೇಳಿದ್ದಾರೆ.

ಕೊನೆಯ ಘಳಿಗೆಯ ಪ್ರತಿಭಟನೆ ಬಗ್ಗೆ ರಾಷ್ಟ್ರಪತಿ ಕಚೇರಿ ಅಚ್ಚರಿ ವ್ಯಕ್ತಪಡಿಸಿತ್ತು. ‘ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಯಾವುದೇ ಸಮಾರಂಭದಲ್ಲಿ ಕೇವಲ ಒಂದು ತಾಸು ಮಾತ್ರ ಇರುತ್ತಾರೆ. ಅವರು ಅಧಿಕಾರ ಸ್ವೀಕರಿಸಿದ ದಿನದಿಂದ ಇದು ಶಿಷ್ಟಾಚಾರವೇ ಆಗಿದೆ. ಈ ವಿಷಯವನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಮೊದಲೇ ತಿಳಿಸಲಾಗಿತ್ತು’ ಎಂದು ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ಅಶೋಕ್ ಮಲಿಕ್ ಹೇಳಿದ್ದಾರೆ.

ರಾಷ್ಟ್ರಪತಿಗಳು ಕೇವಲ 11 ಜನರಿಗೆ ಮಾತ್ರ ಪ್ರಶಸ್ತಿ ನೀಡಿದ್ದಾರೆ. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವವರ ಪಟ್ಟಿಯಲ್ಲಿ ನಟಿ ಶ್ರೀದೇವಿ ಮತ್ತು ವಿನೋದ್ ಖನ್ನಾ ಹೆಸರಿತ್ತು. ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ.

ಭಾಷಣಗಳು ಮತ್ತು ಇತರ ವಿಷಯಗಳಿಗೆ ಸಮಯ ಕಡಿತಗೊಳಿಸಿದರೆ ರಾಷ್ಟ್ರಪತಿ ಮತ್ತಷ್ಟು ಜನರಿಗೆ ಪ್ರಶಸ್ತಿ ನೀಡಬಹುದು ಎಂದು ವಿಜೇತರು ಸಲಹೆ ಮಾಡಿದ್ದರು.

ಈ ಕುರಿತು ಸಚಿವೆ ಸ್ಮೃತಿ ಇರಾನಿ ಅವರ ಗಮನ ಸೆಳೆಯಲಾಗಿದೆ. ಅವರು ಶೀಘ್ರ ಉತ್ತರಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಈವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ‘ಸಮಾರಂಭದಿಂದ ದೂರು ಉಳಿಯುವುದು ಹೊರತುಪಡಿಸಿ ನಮಗೆ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ. ನಾವು ಸಮಾರಂಭಕ್ಕೆ ಬಹಿಷ್ಕಾರ ಹಾಕುತ್ತಿಲ್ಲ; ಸಮಾರಂಭದಿಂದ ದೂರ ಉಳಿಯುವ ಮೂಲಕ ನಮ್ಮ ಅಸಮ್ಮತಿಯನ್ನು ಸಾರಿಹೇಳುತ್ತಿದ್ದೇವೆ ಮತ್ತು ನ್ಯಾಯಯುತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದೇವೆ’ ಎಂದು ಕಲಾವಿದರು ಪತ್ರದಲ್ಲಿ ಹೇಳಿದ್ದಾರೆ.

ಖ್ಯಾತ ಗಾಯಕ ಕೆ.ಜೆ. ಯೇಸುದಾಸ್, ಬಂಗಾಳಿ ಚಿತ್ರ ನಿರ್ಮಾಪಕ ಕೌಶಿಕ್ ಗಂಗೂಲಿ ಮತ್ತು ನಟ ಫದಾಹ್ ಫಾಸಿಲ್ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ಕೊಡುತ್ತಾರೆ ಎನ್ನುವುದೇ ಒಂದು ಹೆಮ್ಮೆ. ರಾಷ್ಟ್ರಪತಿ ಪ್ರಶಸ್ತಿ ಕೊಡಲಿಲ್ಲ ಎಂದರೆ ಅದೂ ಹತ್ತರಲ್ಲಿ ಹನ್ನೊಂದನೆಯ ಪ್ರಶಸ್ತಿ ಆಗುತ್ತೆ ಅಷ್ಟೇ’ ಎಂದು ‘ನ್ಯೂಟನ್’ ಚಿತ್ರ ನಿರ್ಮಾಪಕ ಮಾನಿಶ್ ಮಂದ್ರಾ ಟ್ವಿಟ್ ಮಾಡಿದ್ದಾರೆ.

‘ಪ್ರಶಸ್ತಿ ಅನ್ನೋದು ಪ್ರಶಸ್ತಿ ಅಷ್ಟೇ ಅನ್ನುವುದು ನಿಮ್ಮ ನಿಲುವಾಗಿದ್ದರೆ ಅದನ್ನು ಪೋಸ್ಟ್ ಮೂಲಕ ಕಳುಹಿಸಿಕೊಡಿ’ ಎಂದು ‘ಬಾಹುಬಲಿ’ ನಿರ್ಮಾಪಕ ಪ್ರಸಾದ್ ದೇವಿನೇನಿ ವ್ಯಂಗ್ಯವಾಡಿದ್ದಾರೆ.

Comments are closed.