ಕರ್ನಾಟಕ

ಜಯನಗರ ಬಿಜೆಪಿ ಶಾಸಕ ವಿಜಯ್‌ಕುಮಾರ್‌ ಹೃದಯಾಘಾತದಿಂದ ವಿಧಿವಶ

Pinterest LinkedIn Tumblr


ಬೆಂಗಳೂರು: ಜಯನಗರ ಕ್ಷೇತ್ರದ ಬಿಜೆಪಿ ಶಾಸಕ,ಅಭ್ಯರ್ಥಿ ಬಿ.ಎನ್‌.ವಿಜಯ್‌ ಕುಮಾರ್‌ ಅವರು ಶುಕ್ರವಾರ ನಸುಕಿನ 1 ಗಂಟೆಗೆ ಹೃದಯಾಘಾತದಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ವಿಜಯ್‌ ಕುಮಾರ್‌ ಅವರ ನಿಧನದಿಂದ ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ .

ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅವರು ಸಂಜೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಲಘು ಹೃಯಯಾಘಾತಕ್ಕೀಡಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

2008 ಮತ್ತು 2013 ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದರು.

ಜಯನಗರದ 4 ನೇ ಬ್ಲಾಕ್‌ನಲ್ಲಿ ರುವ ನಿವಾಸದಲ್ಲಿ ಬಿಜೆಪಿ ಮುಖಂಡರು, ಅಭಿಮಾನಿಗಳು ಮತ್ತು ನೂರಾರು ಬಿಜೆಪಿ ಕಾರ್ಯಕರ್ತರು ಜಮಾವಣೆ ಗೊಂಡಿದ್ದಾರೆ. ವಿಜಯ್‌ ಕುಮಾರ್‌ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಆರ್‌.ಅಶೋಕ್‌, ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌, ಸಂಸದ ಪಿ.ಸಿ.ಮೋಹನ್‌, ಕಾಂಗ್ರೆಸ್‌ ಅಭ್ಯರ್ಥಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ನಗರದ ಹಲವು ಶಾಸಕರು, ಬಿಜೆಪಿ, ಕಾಂಗ್ರೆಸ್‌ ಮುಖಂಡರು ಪಕ್ಷಾತೀತವಾಗಿ ಅಂತಿಮ ದರ್ಶನ ಪಡೆದಿದ್ದಾರೆ.

ನೇತ್ರದಾನ

ವಿಜಯ್‌ಕುಮಾರ್‌ ಅವರು ಕಣ್ಣುಗಳನ್ನು ದಾನ ಮಾಡಿ ಆದರ್ಶ ಮೆರೆದಿದ್ದಾರೆ.

ಚಾಮರಾಜ ಪೇಟೆ ರುದ್ರ ಭೂಮಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಅವಿವಾಹಿತ,ಸಂಘದ ಕಾರ್ಯಕರ್ತ

ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ವಿಜಯ ಕುಮಾರ್‌ ಅವರು ಅವಿವಾಹಿತರು. ಬಿಜೆಪಿಯ ಸಜ್ಜನ ರಾಜಕಾರಣಿ ಎಂಬ ಹೆಸರಿಗೆ ಪಾತ್ರರಾದವರಲ್ಲಿ ವಿಜಯಕುಮಾರ್‌ ಅವರು ಒಬ್ಬರು.

-Udayavani

Comments are closed.