ಕರ್ನಾಟಕ

ಮೆಟ್ರೊ ರೈಲಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

Pinterest LinkedIn Tumblr


ಬೆಂಗಳೂರು: ಮೆಟ್ರೊ ರೈಲಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಖಾಸಗಿ ಕಂಪನಿಯೊಂದರ ಉದ್ಯೋಗಿಯನ್ನು ಸಾರ್ವಜನಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ.

ಉತ್ತರಹಳ್ಳಿ ವಸಂತ ವಲ್ಲಭ ನಗರ ನಿವಾಸಿ ಪ್ರವೀಣ್‌ ಜಿ. ಹೆಗ್ಡೆ (27) ಬಂಧಿತ ಆರೋಪಿ. ಬೆಂಗಳೂರು ಪೂರ್ವ ಭಾಗದಲ್ಲಿ ನೆಲೆಸಿರುವ 30 ವರ್ಷದ ಮಹಿಳೆಯೊಬ್ಬರು ಏ.30ರಂದು ಸಂಜೆ 5.20ರ ಸುಮಾರಿಗೆ ಮೆಟ್ರೊ ರೈಲಿನಲ್ಲಿ ರಾಜಾಜಿನಗರದಿಂದ ಬನಶಂಕರಿಗೆ ಹೊರಟಿದ್ದರು. ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಪ್ರವೀಣ್‌, ರೈಲು ಮೆಜೆಸ್ಟಿಕ್‌ ನಿಲ್ದಾಣ ತಲುಪುತ್ತಿದ್ದಂತೆ ಮಹಿಳೆಗೆ ಅಂಟಿಕೊಂಡು ನಿಂತು ಕಿರುಕುಳ ನೀಡಲು ಆರಂಭಿಸಿದ್ದ. ರೈಲು ಜಯನಗರ ತಲುಪುತ್ತಿದ್ದಂತೆ ಕಿರುಕುಳ ತೀವ್ರವಾಗಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಆರೋಪಿಯನ್ನು ಜಯನಗರ ನಿಲ್ದಾಣದಲ್ಲಿ ಕೆಳಗೆ ಇಳಿಸಿ ಥಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ನಂತರ ಆರೋಪಿಯನ್ನು ಜಯನಗರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ.

ಬಿ.ಕಾಂ ವ್ಯಾಸಂಗ ಮಾಡಿರುವ ಪ್ರವೀಣ್‌, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಂತ್ರಸ್ತ ಮಹಿಳೆ ನೀಡಿದ ದೂರು ಆಧರಿಸಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಶರಣಪ್ಪ ತಿಳಿಸಿದರು.

ಮೆಟ್ರೊ ರೈಲಿನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಪದೇ ಪದೆ ಕೇಳಿ ಬರುತ್ತಿದೆ. ಮಹಿಳಾ ಆಯೋಗ ಕೂಡ ಲೈಂಗಿಕ ದೌರ್ಜನ್ಯ ತಡೆಯಲು ಮಹಿಳೆಯರಿಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಮಾಡುವಂತೆ ಬಿಎಂಆರ್‌ಸಿಎಲ್‌ಗೆ ಕೋರಿತ್ತು. ಇದರ ಬಳಿಕ ಮುಂದಿನ ಎರಡು ಬಾಗಿಲಿನ ಮೂಲಕ ಮಹಿಳೆಯರಿಗೆ ಪ್ರತ್ಯೇಕ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಬೋಗಿ ಅಳವಡಿಸಿದ ಬಳಿಕ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿಡುವುದಾಗಿ ಬಿಎಂಆರ್‌ಸಿಎಲ್‌ ಭರವಸೆ ನೀಡಿದೆ.

Comments are closed.