ಕರ್ನಾಟಕ

ನಾನು ಗೆದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂದಿದ್ರು ಗೌಡರು: ಮೋದಿ

Pinterest LinkedIn Tumblr


ತುಮಕೂರು : “2014ರ ಲೋಕಸಭಾ ಚುನಾವಣೆ ಪ್ರಚಾರಾರ್ಥ ನಾನು ಕರ್ನಾಟಕಕ್ಕೆ ಬಂದರೆ ಮತ್ತು ಒಂದೊಮ್ಮೆ ನಾನು ಅಧಿಕಾರಕ್ಕೆ ಬಂದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ದೇವೇಗೌಡರು ಬೆದರಿಕೆ ಹಾಕಿದ್ದರು. ಅಂದು ಅವರು ಹಾಗೆ ಹೇಳಿದ್ದ ಹೊರತಾಗಿಯೂ ನಾನು ಅವರನ್ನು ಇಂದಿಗೂ ಗೌರವಿಸುತ್ತೇನೆ ಮತ್ತು ಅವರು ನೂರು ವರ್ಷ ಕಾಲ ಬಾಳಿ ಬದುಕಿ ಸಮಾಜ ಸೇವೆ ಸಲ್ಲಿಸಲಿ ಎಂದು ಹಾರೈಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ತುಮಕೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಕಾಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

ಉಡುಪಿಯಲ್ಲಿ ಮಾಡಿದ್ದ ಚುನಾವಣಾ ಪ್ರಚಾರ ಭಾಷಣದಲ್ಲಿ ಜೆಡಿಎಸ್‌ ಮುಖ್ಯಸ್ಥ, ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅನಂತರ ಬೇರೆ ಬೇರೆ ಕಡೆ ನಡೆದ ಕಾರ್ಯಕ್ರಮದಲ್ಲಿ ದೇವೇಗೌಡ ಮತ್ತು ಅವರ ಜೆಡಿಎಸ್‌ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸುತ್ತಿರುವುದು ಎಲ್ಲರ ಅಚ್ಚರಿಗೆ, ವಿಸ್ಮಯಕ್ಕೆ ಕಾರಣವಾಗಿದೆ.

For years, the Congress kept chanting ‘Gareeb’. However, when a poor mother’s son became PM, they changed their slogan and started chanting ‘farmers’ : PM Modi in Tumakuru, Karnataka, #KannadigasWithModi pic.twitter.com/RexeK6UoCn

— BJP (@BJP4India) May 5, 2018

ತುಮಕೂರು ಭಾಷಣ ಕಾರ್ಯಕ್ರಮದಲ್ಲಿ ಇಂದು ಮಾತನಾಡುತ್ತಾ ಮೋದಿ, “ದೇವೇಗೌಡರ ಜೆಡಿಎಸ್‌, ಕಾಂಗ್ರೆಸ್‌ ಪಕ್ಷವನ್ನು ರಕ್ಷಿಸುತ್ತಿದೆ’ ಎಂದರಲ್ಲದೆ “ನಾನು ಪ್ರಧಾನಿಯಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ಅವರು ಸರ್ವ ರೀತಿಯಲ್ಲಿ ತಡೆಯುವ ಯತ್ನವನ್ನು ಮಾಡಿದ್ದರು’ ಎಂದು ಆರೋಪಿಸಿದರು.

ಇನ್ನೊಂದು ಅಚ್ಚರಿಯ ಆರೋಪವಾಗಿ ಪ್ರಧಾನಿ ಮೋದಿ ಅವರು, “ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿದೆ’ ಎಂದು ಹೇಳಿದರು.

“ಚುನಾವಣಾ ಸಮೀಕ್ಷೆಗಳು, ರಾಜಕೀಯ ಪಂಡಿತರು ಮುಂತಾಗಿ ಎಲ್ಲರೂ ಹೇಳಿದ್ದರು: ಜೆಡಿಎಸ್‌ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲಾರದು. ಜೆಡಿಎಸ್‌ ಸ್ವಂತ ಬಲದಲ್ಲಿ ಸರಕಾರ ರಚಿಸಲಾರದು. ಕರ್ನಾಟಕದಲ್ಲಿ ಸರಕಾರವನ್ನು ಯಾರಿಗಾದರೂ ಸರಕಾರವನ್ನು ಬದಲಿಸಲು ಸಾಧ್ಯವಿದ್ದರೆ ಅದು ಬಿಜೆಪಿಗೆ ಮಾತ್ರ. ಕಾಂಗ್ರೆಸನ್ನು ಯಾರಾದರೂ ರಕ್ಷಿಸುವುದಿದ್ದರೆ ಅದು ಜೆಡಿಎಸ್‌ ಮಾತ್ರ; ಅಂತೆಯೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ರಹಸ್ಯ ಒಪ್ಪಂದ ಏರ್ಪಟ್ಟಿದೆ. ಇದು ತೆರೆಮರೆಯ ಒಪ್ಪಂದವಾಗಿದೆ’ ಎಂದು ಮೋದಿ ಹೇಳಿದರು.

ಮುಂದುವರಿದು ಮಾತನಾಡಿದ ಮೋದಿ, “ಜೆಡಿಎಸ್‌ ಜತೆಗೆ ತಾನು ರಹಸ್ಯ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಕಾಂಗ್ರೆಸ್‌ ಈಗ ಸ್ಪಷ್ಟವಾಗಿ ತಿಳಿಸಬೇಕು. ದೇವೇಗೌಡರ ಪಕ್ಷದ ಬೆಂಬಲದಿಂದಲೇ ಕಾಂಗ್ರೆಸ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತನ್ನ ಮೇಯರ್‌ ಹೊಂದಿದೆ. ಇದನ್ಯಾಕೆ ನೀವು ಮರೆ ಮಾಚುತ್ತಿದ್ದೀರಿ ? ಜನರಿಗೆ ಸತ್ಯವನ್ನು ತಿಳಿಸುವ ಧೈರ್ಯವನ್ನು ಕಾಂಗ್ರೆಸ್‌ ತೋರಬೇಕು’ ಎಂದು ಹೇಳಿದರು.

ಮೋದಿ ಅವರು ಉಡುಪಿ ಭಾಷಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾಜಿ ಪ್ರಧಾನಿ ದೇವೇಗೌರನ್ನು ಅವಮಾನಿಸಿದ್ದುದನ್ನು ಖಂಡಿಸಿದ್ದರು. ಆದರೆ ಮೋದಿ ಅವರ ಮಾತು ಚುನಾವಣೆಗಾಗಿ ಜನರ ಅನುಕಂಪ ಪಡೆಯುವ ತಂತ್ರವೆಂದು ಪ್ರತಿಕ್ರಿಯಿಸಿದ್ದರು.

-Udayavani

Comments are closed.