ಮನೋರಂಜನೆ

ಚೆನ್ನೈನ ಎಂಐಟಿಯಲ್ಲಿ ನಟ ಅಜಿತ್‌ಗೆ 1000 ರೂ. ಸಂಬಳ

Pinterest LinkedIn Tumblr


ತಮಿಳು ನಟ ’ತಾಲಾ’ ಅಜಿತ್‌ಗೆ ಚೆನ್ನೈನ ಪ್ರತಿಷ್ಠಿತ ಎಂಐಟಿಯಲ್ಲಿ ಉದ್ಯೋಗ ಸಿಕ್ಕಿದೆ. ಸಂಬಳ ಎಷ್ಟು ಗೊತ್ತಾ? ಬರೀ 1000 ರೂ. ನಂಬಲಸಾಧ್ಯವಾದರೂ ಇದು ನಿಜ. ಸಿನಿಮಾ ಒಂದಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅಜಿತ್ ಈಗ ಕೇವಲ 1000 ರೂ. ಸಂಬಳ ತೆಗೆದುಕೊಳ್ಳುತ್ತಾರೆ ಎಂದರೆ ಯಾರು ತಾನೆ ನಂಬುತ್ತಾರೆ ಅಲ್ಲವೇ? ಆದರೆ ಇದು ನಿಜ.

ತಮಿಳುನಾಡಿನಲ್ಲಿ ರಜನಿಕಾಂತ್, ಕಮಲ್ ಹಾಸನ್‍ನಂತಹ ಸೂಪರ್ ಸ್ಟಾರ್‌ಗಳು ರಾಜಕೀಯದಲ್ಲಿ ಬಿಜಿಯಾಗಿದ್ದರೆ ನಟ ಅಜಿತ್ ಕುಮಾರ್ ಮಾತ್ರ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಪ್ರತಿಷ್ಠಿತ ಫ್ಲಯಿಂಗ್ ರೋಬೋ ಕಾಂಪಿಟೇಷನ್ ಯುಎವಿ ಚಾಲೆಂಜ್‌ನಲ್ಲಿ ಪಾಲ್ಗೊಳ್ಳಲಿರುವ ಎಂಐಟಿಯ ’ದಕ್ಷ’ ತಂಡದ ಸದ್ಯಸ್ಯರಿಗೆ ಅಜಿತ್ ಶಿಕ್ಷಣ ನೀಡುತ್ತಿದ್ದು, ಅವರನ್ನು ಹೆಲಿಕಾಪ್ಟರ್ ಟೆಸ್ಟ್ ಪೈಲಟ್, ಯುಎವಿ ಸಿಸ್ಟಮ್ ಅಡ್ವೈಸರ್ ಆಗಿ ಎಂಐಟಿಯ ಅನ್ನಾ ವಿಶ್ವವಿದ್ಯಾಲಯ ನೇಮಿಸಿದೆ.

ತಮಿಳುನಾಡಿನಲ್ಲಿ ಅಜಿತ್‌ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದುವರೆಗೆ ತಾಲಾ ಆಗಿ ಬೆಳ್ಳಿಪರದೆ ಮೇಲೆ ರಂಜಿಸಿದ ಅಜಿತ್ ಈಗ ನಿಜಜೀವನದಲ್ಲಿ ಶಿಕ್ಷಕನಾಗಿ ಬದಲಾಗಿ ವಿದ್ಯಾರ್ಥಿಗಳಿಗೆ ಪೈಲಟ್ ಪಾಠಗಳನ್ನು ಕಲಿಸುತ್ತಿದ್ದಾರೆ. ಈ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕ್ವೀನ್ಸ್‌ಲ್ಯಾಂಡ್‌ನಲ್ಲಿ ’ಮೆಡಿಕಲ್ ಎಕ್ಸ್‌ಪ್ರೆಸ್ -2018’ ಯುಎವಿ ಚಾಲೆಂಜ್ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಎಂಐಟಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ajith
ಅಜಿತ್ ಒಬ್ಬ ನಟ ಎಂಬುದಷ್ಟೇ ಬಹಳಷ್ಟು ಮಂದಿಗೆ ಗೊತ್ತು. ಆದರೆ ಅವರೊಬ್ಬ ಸರ್ಟಿಫೈಡ್ ಪೈಲಟ್ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಪೈಲಟ್ ಲೈಸೆನ್ಸನ್ನೂ ಹೊಂದಿದ್ದು ಯುದ್ಧವಿಮಾನವನ್ನು ಚಾಲನೆ ಮಾಡುವಷ್ಟು ಸಾಮರ್ಥ್ಯ ಅವರಿಗಿದೆ. ಅಷ್ಟೆ ಅಲ್ಲ ಬೈಕ್ ರೇಸರ್, ಫಾರ್ಮುಲಾ ಒನ್ ರೇಸರ್ ಕೂಡ.

ಅಜಿತ್ ಶಾಲಾ ಶಿಕ್ಷಣ ಪಡೆಯುವ ದಿನಗಳಲ್ಲೇ ಏರೋ ಮಾಡೆಲಿಂಗ್ ಬಗ್ಗೆ ಅತೀವ ಆಸಕ್ತಿ ತೋರುತ್ತಿದ್ದರಂತೆ. ಗಾಳಿಯಲ್ಲಿ ಹಾರಾಡುವ ರಿಮೋಟ್ ಕಂಟ್ರೋಲ್ ವಾಹನಗಳನ್ನು ತಯಾರಿಸುವಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಆ ಆಸಕ್ತಿಯಿಂದಲೇ ಪೈಲಟ್ ಶಿಕ್ಷಣ ಪಡೆದರು. ಸಿನಿಮಾಗಳ ಮೂಲಕ ಕೋಟ್ಯಂತರ ರೂ. ಸಂಪಾದಿಸುತ್ತಿರುವ ಅಜಿತ್‍ಗೆ ಎಂಐಟಿ ಸಂಬಳವನ್ನೂ ನಿರ್ಧರಿಸಿದೆ. ಒಮ್ಮೆ ಎಂಐಟಿಗೆ ಬಂದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅಜಿತ್‌ಗೆ 1000 ರೂ. ಸಂಬಳ ನೀಡುತ್ತಿದ್ದಾರೆ. ಆದರೆ ಆ ಹಣವನ್ನು ಅಜಿತ್ ಸ್ವೀಕರಿಸದೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವುದು ಗಮನಾರ್ಹ.

Comments are closed.