ಕರ್ನಾಟಕ

ಪ್ರತಿಷ್ಠಿತ ಸುರಪುರದ ಪಾರುಪತ್ಯಕ್ಕೆ ನಾಯಕರು ಯಾರು?

Pinterest LinkedIn Tumblr

ಜಿದ್ದಾಜಿದ್ದಿನ ಚುನಾವಣೆಗೆ ಸುರಪುರ ಮತಕ್ಷೇತ್ರ ಹೆಸರುವಾಸಿ. ಕ್ಷೇತ್ರದಲ್ಲಿ ವಾಲ್ಮೀಕಿ ಜನಾಂಗದವರ ಪಾರುಪತ್ಯವಿದೆ.
ಸ್ವಾತಂತ್ರಾéನಂತರ ಇಲ್ಲಿಯವರೆಗೆ ಕ್ಷೇತ್ರದಲ್ಲಿ ವಾಲ್ಮೀಕಿ ಜನಾಂಗದವರೇ ಶಾಸಕರಾಗಿರುವುದು ವಿಶೇಷ. ಪಕ್ಷಕ್ಕಿಂತ ವ್ಯಕ್ತಿಗಳ ನಡುವಿನ ಚುನಾವಣೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಶಾಸಕ ರಾಜಾವೆಂಕಟಪ್ಪ ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ನಡುವೆ ನೇರಾ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್‌ ಅಭ್ಯರ್ಥಿಯಾಗಿ ರಾಜಾ ಕೃಷ್ಣಪ್ಪ ನಾಯಕ ಅವರು ಕಣದಲ್ಲಿರುವುದರಿಂದ ಚುನಾವಣೆ ಕಾವು ಏರಿದೆ.

2008ರಲ್ಲಿ ಬಿಜೆಪಿಯಿಂದ ರಾಜೂಗೌಡ, 2013ರಲ್ಲಿ ಕಾಂಗ್ರೆಸ್‌ನಿಂದ ರಾಜಾವೆಂಕಟಪ್ಪ ನಾಯಕ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2018ರಲ್ಲಿ 2ನೇ ಬಾರಿಗೆ ಶಾಸಕರಾಗಲು ರಾಜಾವೆಂಕಟಪ್ಪ ನಾಯಕ ಬಯಸಿದರೆ, ರಾಜೂಗೌಡ 2013ರ ಸೋಲಿನ ಸೇಡು ತೀರಿಸಿಕೊಳ್ಳಲು ಕಾತರರಾಗಿದಾರೆ. ಕಳೆದ 3 ವಿಧಾನಸಭೆ ಚುನಾವಣೆಯಲ್ಲಿ ಇವರಿಬ್ಬರೂ ಎದುರಾಳಿಯಾಗಿದ್ದರು. ಈಗ ನಾಲ್ಕನೇ ಬಾರಿಯೂ ಎದುರಾಳಿಯಾಗಿದ್ದು,ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದೆ.

ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕ್ಷೇತ್ರವಾಗಿದೆ. ಸ್ವಾತಂತ್ರ್ಯಹೋರಾಟದಲ್ಲಿ ಸುರಪುರ ರಾಜರ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸುರಪುರ ತಾಲೂಕಿನಿಂದ ಬೇರ್ಪಟ್ಟು ಹುಣಸಗಿ ಹೊಸ ತಾಲೂಕಾಗಿದೆ.

ನಾರಾಯಣಪುರ ಜಲಾಶಯ, ಬೋನಾಳ ಪಕ್ಷಿಧಾಮ, ತಿಂಥಣಿ ಮೌನೇಶ್ವರ ಹೀಗೆ ಅನೇಕ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿದೆ. ಕೆಲಸವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗುವವರ ಸಂಖ್ಯೆ ಹೆಚ್ಚಿದೆ. ಶೈಕ್ಷಣಿಕ, ಕೈಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದೆ.

ನಿರ್ಣಾಯಕ ಅಂಶವೇನು?
ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ವಾಲ್ಮೀಕಿ ಸಮಾಜಕ್ಕೆ ಸೇರಿದವರಾಗಿದ್ದು, ಸಾಮಾನ್ಯವಾಗಿ ಆ ಮತಗಳು ಇಬ್ಬರಿಗೂ ಬೀಳಲಿವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬರ ಮತ ಪಡೆಯಲು ಇಬ್ಬರು ಅಭ್ಯರ್ಥಿಗಳು ರಣತಂತ್ರ ರೂಪಿಸುತ್ತಿದ್ದಾರೆ. ಯಾರು ಕುರುಬರ ಮತಗಳನ್ನು ಪಡೆಯಲು ಯಶಸ್ವಿಯಾಗುತ್ತಾರೆ ಅವರಿಗೆ ಜಯ ಖಚಿತ ಎನ್ನಲಾಗಿದೆ.

ಮತಕ್ಷೇತ್ರದಲ್ಲಿ ರಾಜಾ ವೆಂಕಟಪ್ಪ ನಾಯಕ ಅವರ ಪರ ಆಡಳಿತ ವಿರೋಧಿ ಅಲೆ ಇದೆ.ಮತದಾರರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ನೂರರಷ್ಟು ಗೆಲುವು ನೀಡಲಿದ್ದಾರೆ ಎಂಬ ವಿಶ್ವಾಸವಿದೆ.
– ನರಸಿಂಹ ನಾಯಕ (ರಾಜೂಗೌಡ),ಬಿಜೆಪಿ ಅಭ್ಯರ್ಥಿ

ಐದು ವರ್ಷದ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.ನೀರಾವರಿ ಯೋಜನೆ ಕೈಗೊಂಡಿದ್ದೇನೆ. ಈ ಎಲ್ಲ ವಿಷಯಗಳು ನನ್ನ ಗೆಲುವಿಗೆ ಸಹಕಾರಿಯಾಗಲಿವೆ. ಕ್ಷೇತ್ರದಾದ್ಯಂತ ಮತದಾರರು ಕಾಂಗ್ರೆಸ್‌ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ.
– ರಾಜಾ ವೆಂಕಟಪ್ಪ ನಾಯಕ, ಕಾಂಗ್ರೆಸ್‌ ಅಭ್ಯರ್ಥಿ

ಮಾಜಿ ಸಿಎಂ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಈ ಬಾರಿ ಜೆಡಿಎಸ್‌ಗೆ ಅವಕಾಶ ನೀಡುತ್ತಾರೆ ಎಂಬ ದೃಢವಾದ ನಂಬಿಕೆ ಇದೆ.
– ರಾಜಾ ಕೃಷ್ಣಪ್ಪ ನಾಯಕ, ಜೆಡಿಎಸ್‌ ಅಭ್ಯರ್ಥಿ

– ರಾಜೇಶ ಪಾಟೀಲ ಯಡ್ಡಳ್ಳಿ

-Udayavani

Comments are closed.