ಮನೋರಂಜನೆ

ಸಿನಿಮಾ ಪ್ರಶಸ್ತಿಗಳು ವಿಜೇತರ ಮನೆಗೆ ರವಾನೆ

Pinterest LinkedIn Tumblr


ಹೊಸದಿಲ್ಲಿ: ಇತ್ತೀಚೆಗೆ ನಡೆದಿದ್ದ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರಾಗಿದ್ದವರ ಪ್ರಶಸ್ತಿಗಳನ್ನು ಅವರ ಮನೆಗಳಿಗೆ ಅಂಚೆಯ ಮೂಲಕ ತಲುಪಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ.

ಈ ಬಾರಿಯ ಪ್ರಶಸ್ತಿ ವಿಜೇತರಲ್ಲಿ 11 ಮಂದಿಗೆ ಮಾತ್ರ ರಾಷ್ಟ್ರಪತಿ ಖುದ್ದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಳಿದ ಸಾಧಕರಿಗೆ ಸಚಿವರಾದ ಸ್ಮತಿ ಇರಾನಿ ಹಾಗೂ ರಾಜ್ಯವರ್ಧನ್‌ ರಾಥೋಡ್‌ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆಂಬ ಅಧಿಕೃತ ಮಾಹಿತಿಯ ವಿರುದ್ಧ ಅಸಮಾಧಾನಗೊಂಡಿದ್ದ ಸುಮಾರು 70ಕ್ಕೂ ಹೆಚ್ಚು ಪ್ರಶಸ್ತಿ ವಿಜೇತರು, ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿದಿದ್ದರು. ಇಂಥ ಬೆಳವಣಿಗೆ ನಡೆದಿದ್ದು,ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇತಿಹಾಸದಲ್ಲೇ ಇದೇ ಮೊದಲು. ಈ ಹಿನ್ನೆಲೆಯಲ್ಲಿ, ಸಮಾರಂಭಕ್ಕೆ ಗೈರಾಗಿದ್ದವರ ಪ್ರಶಸ್ತಿಗಳನ್ನು ಅವರ ಮನೆಗಳಿಗೇ ತಲುಪಿಸಲು ಸಚಿವಾಲಯ ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಲಯದ ಅಧಿಕಾರಿಯೊಬ್ಬರು, ಈ ಹಿಂದೆಯೂ ಸಮಾರಂಭಕ್ಕೆ ಕಾರಣಾಂತರಗಳಿಂದ ಗೈರಾದವರಿಗೆ ಪ್ರಶಸ್ತಿಗಳನ್ನು ಅಂಚೆಯ ಮೂಲಕ ತಲುಪಿಸಲಾಗಿತ್ತು. ಈಗಲೂ ಅದೇ ರೀತಿ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ಅತೃಪ್ತಿ
ಪ್ರಶಸ್ತಿ ಪ್ರದಾನ ಸಮಾರಂಭದಿಂದ 70ಕ್ಕೂ ಹೆಚ್ಚು ಮಂದಿ ಪ್ರಶಸ್ತಿ ವಿಜೇತರು ದೂರ ಉಳಿದ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಕಚೇರಿಗೆ ಈ ಕುರಿತು ಸಂದೇಶ ಕಳುಹಿಸಿರುವ ರಾಷ್ಟ್ರಪತಿ ಕಾರ್ಯಾಲಯ, ಅನಗತ್ಯವಾಗಿ ರಾಷ್ಟ್ರಪತಿ ಭವನವನ್ನು ವಿವಾದದಲ್ಲಿ ಎಳೆದು ತಂದಿದ್ದರ ಬಗ್ಗೆ ಖೇದ ವ್ಯಕ್ತಪಡಿಸಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ನಾವು ಪ್ರಶಸ್ತಿ ತಿರಸ್ಕರಿಸಿರಲಿಲ್ಲ. ರಾಷ್ಟ್ರಪ್ರಶಸ್ತಿಯನ್ನು ರಾಷ್ಟ್ರಪತಿ ಗಳಿಂದಲೇ ಪಡೆಯಬೇಕೆಂಬ ಇಚ್ಛೆಯಿತ್ತು. ಆದರೆ ಬೇರೆ ಯಾರೋ ಕೊಡುತ್ತಾರೆ ಎಂದಾಗ, ಸಹಜವಾಗಿಯೇ ಬೇಸರವಾಗಿತ್ತು. ಈಗ ಅದಾಗಿಯೇ, ಮನೆಗೆ ಬರುತ್ತೆ ಎಂದರೆ, ನಮ್ಮ ಪಾಡಿಗೆ ನಾವು ಸ್ವೀಕರಿಸುತ್ತೇವೆ.
ಅಭಯಸಿಂಹ, “ಪಡ್ಡಾಯಿ’ ಚಿತ್ರದ ನಿರ್ದೇಶಕರು

-Udayavani

Comments are closed.