ಕರಾವಳಿ

ಭಿನ್ನ ಕೋಮಿನ ಪ್ರೇಮ ಪ್ರಕರಣ : ಮಂಗಳೂರಿನಲ್ಲಿ ಗೃಹ ಬಂಧನದಲ್ಲಿದ್ದ ಕೇರಳದ ಯುವತಿಯ ರಕ್ಷಣೆ

Pinterest LinkedIn Tumblr

( ಸಾಂದರ್ಭಿಕ ಚಿತ್ರ )

ಮಂಗಳೂರು, ಮೇ 7: ಇನ್ನೊಂದು ಕೋಮಿನ ಹುಡುಗನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಕೇರಳ ಮೂಲದ ಯುವತಿಯೊಬ್ಬಳನ್ನು ಮಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಗೃಹಬಂಧನದಲ್ಲಿರಿಸಿ ಹಿಂಸೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ನಡುವೆ ಮಂಗಳೂರಿನ ಪೊಲೀಸರು ಯುವತಿಯನ್ನು ರಕ್ಷಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇರಳ ತ್ರಿಶ್ಶೂರು ಮೂಲದ ಯುವತಿಯೊಬ್ಬಳು ಇನ್ನೊಂದು ಧರ್ಮದ ಯುವಕಯೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ಹೇಳಲಾಗಿದೆ. ಇದೇ ಕಾರಣಕ್ಕೆ ತಾನು ಅಜ್ಞಾತ ಸ್ಥಳವೊಂದರಿಂದಲೇ ಗೃಹಬಂಧನದಲಿದ್ದು, ಅಲ್ಲಿ ನರಕ ಯಾತನೆ ಅನುಭವಿಸುತ್ತಿರುವುದಾಗಿ ಯುವತಿಯು ಉನ್ನತ ಪೊಲೀಸ್ ಅಧಿಕಾರಿಗೆ ವೀಡಿಯೊವೊಂದನ್ನು ಕಳುಹಿಸಿ ವಿವರಿಸಿದ್ದಾಳೆ ಎಂದು ಹೇಳಲಾಗಿದೆ.

”ಈ ಮೊದಲು ನನ್ನನ್ನು ತ್ರಿಶೂರಿನ ಅಜ್ಞಾತ ಸ್ಥಳವೊಂದರಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿತ್ತು. ಬಳಿಕ ಕೇರಳದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ತಾನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಬಳಿಕ ತ್ರಿಶೂರಿನಿಂದ ನನ್ನನ್ನು ಮಂಗಳೂರಿಗೆ ಕರೆತರಲಾಗಿದೆ. ಮಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ” ಎಂದು ಯುವತಿ ವೀಡಿಯೊದಲ್ಲಿ ಹೇಳಿಕೊಂಡಿದ್ದಾಳೆ. ತಾನು ಇರುವ ಅಜ್ಞಾತ ಸ್ಥಳವನ್ನು ವೀಡಿಯೊದಲ್ಲಿ ತೋರಿಸುವ ಪ್ರಯತ್ನ ಮಾಡಿರುವ ಯುವತಿ, ಅಲ್ಲಿ ತನಗೆ ನೀಡಿರುವ ಹಿಂಸೆಯಿಂದ ದೇಹದಲ್ಲಾದ ಗಾಯದ ಗುರುತುಗಳನ್ನೂ ತೋರಿಸಿದ್ದಾಳೆ.

ಯುವತಿಯ ಈ ಅಕ್ರಮ ಗೃಹಬಂಧನಕ್ಕೆ ಸಂಬಂಧಿಸಿ ಕೇರಳ ಪೊಲೀಸರು ಮಂಗಳೂರಿನ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಮಂಗಳೂರಿನ ಪೊಲೀಸರು ಯುವತಿಯನ್ನು ಕೂಡಿಹಾಕಿರುವ ಅಜ್ಞಾತ ಸ್ಥಳವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆಕೆಯನ್ನು ರಕ್ಷಿಸಿ ಪುನರ್ವಸತಿ ಕೇಂದ್ರವೊಂದಕ್ಕೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿ ಕೃಪೆ : ವಾರ್ತಾ ಭಾರತಿ

Comments are closed.