ಕರಾವಳಿ

ಬಿಜೆಪಿ ತೊರೆದು ಕಾಂಗ್ರೆಸ್ ‘ಕೈ’ ಹಿಡಿದ ಮಡಾಮಕ್ಕಿ ಗ್ರಾ.ಪಂ ಅಧ್ಯಕ್ಷರ ಮನೆ ಮೇಲೆ ಕಲ್ಲು ತೂರಾಟ

Pinterest LinkedIn Tumblr

ಕುಂದಾಪುರ: ಬಿಜೆಪಿ ಪಕ್ಷದ ಬಗ್ಗೆ ಅಸಮಾಧಾನಗೊಂಡು ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಎರಡು ದಿನಗಳ ಹಿಂದಷ್ಟೇ (ಭಾನುವಾರ) ಕಾಂಗ್ರೆಸ್ ಪಕ್ಷ ಸೇರಿದ್ದ ಮಡಾಮಕ್ಕಿ ಗ್ರಾ.ಪಂ ಅಧ್ಯಕ್ಷ ರಾಜೀವ ಕುಲಾಲ್ ಎನ್ನುವವರ ಮನೆ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಡರಾತ್ರಿ ಬಂದ 7-8 ಮಂದಿ ಅಪರಿಚಿತರಿಂದ ಕೃತ್ಯ ನಡೆದಿದ್ದು ಮನಸ್ಸೋಇಚ್ಚೆ ಕಲ್ಲು ತೂರಿದ್ದಾರೆ. ಮಡಮಕ್ಕಿ ಗ್ರಾ.ಪಂ ಅಧ್ಯಕ್ಷ ರಾಜು ಕುಲಾಲ್ ಬಿಜೆಪಿಯಿಂದ ತನಗೆ ಅನ್ಯಾಯವಾಗಿದೆಯೆಂದು ಆರೋಪಿಸಿ ಭಾನುವಾರ ಸ್ಥಳೀಯ ಮುಖಂಡ ಉದಯ್ ಪೂಜಾರಿ ಹಾಗೂ ಇತರರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಇದು ನಡೆದ ಒಂದೇ ದಿನದಲ್ಲಿ ತನ್ನ ಮನೆಯ ಮೇಲೆ ಕಲ್ಲು ತೂರಾಟ ನಡೆದಿರುವುದು ರಾಜೀವ ಕುಲಾಲರನ್ನು ತಬ್ಬಿಬ್ಬು ಮಾಡಿದೆ.

೨೨ ವರ್ಷದಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದ ರಾಜೀವ್ ಅವರ ಮೇಲೆ ರಾಜಕೀಯ ದ್ವೇಷವಿದ್ದು ಅದರಿಂದಲೇ ಕೃತ್ಯ ನಡೆದಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ರಾಜೀವ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು. ಏಕಾ‌ಏಕಿ ಕಲ್ಲು ತೂರಿದ ದುಷ್ಕರ್ಮಿಗಳ ದಾಳಿಗೆ ಬೆದರಿ ಬಾಗಿಲು ಮುಚ್ಚಿದ್ದರಿಂದ ಮನೆಮಂದಿ ಪಾರಾಗಿದ್ದು ಮನೆಯ ಕಿಟಕಿ, ಗೇಟ್ ಲೈಟ್ ಮೊದಲಾದವು ಹಾನಿಗೊಳಗಾಗಿದೆ. ವಿದ್ಯುತ್ ಇಲ್ಲದ ಕಾರಣ ಅಪರಿಚಿತರ ಗುರುತು ಪತ್ತೆಯಾಗಿಲ್ಲ.

ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ಭೇಟಿ ನೀಡಿದ್ದಾರೆ.

Comments are closed.