ಕರ್ನಾಟಕ

ಬಿಜೆಪಿಗೆ ಮತ್ತೊಂದು ಗೆಲುವಿನ ನಿರೀಕ್ಷೆ

Pinterest LinkedIn Tumblr


ಬೆಂಗಳೂರು: ಉಪ ಚುನಾವಣೆಯಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಹೆಬ್ಬಾಳದಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗಳು ಗೆಲುವಿಗಾಗಿ ನಾನಾ ತಂತ್ರಗಾರಿಕೆ, ಕಸರತ್ತುಗಳಲ್ಲಿ ತೊಡಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ನಂತರ ಶಾಸಕ ಜಗದೀಶ್‌ಕುಮಾರ್‌ ಅವರ ಅಕಾಲಿಕ ಮರಣದಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿದ್ದ ಬಿಜೆಪಿಯ ಡಾ.ವೈ.ಎ.ನಾರಾಯಣಸ್ವಾಮಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಭೈರತಿ ಸುರೇಶ್‌ ನಗರದಲ್ಲೊಂದು ಕ್ಷೇತ್ರ ಭದ್ರಪಡಿಸಿಕೊಳ್ಳುವ ತವಕದಲ್ಲಿದ್ದಾರೆ. ಇವರ ಜತೆಗೆ ಜೆಡಿಎಸ್‌ ಅಭ್ಯರ್ಥಿ ಹನುಮಂತೇಗೌಡ ಸಹ ಹೋರಾಟ ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ, ದಲಿತರು, ಕುರುಬರು ಹಾಗೂ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಸ್ಲಿಂ ಹಾಗೂ ಕುರುಬ ಮತದಾರರು ನಿರ್ಣಾಯಕರು. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಅಧಿಕೃತ ಅಭ್ಯರ್ಥಿಗಳ ಜತೆಗೆ ಜೆಡಿಯು, ಎಂವಿಪಿ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ 28 ಮಂದಿ ಕಣದಲ್ಲಿದ್ದಾರೆ.

ಕ್ಷೇತ್ರದ 8 ವಾರ್ಡ್‌ಗಳ ಪೈಕಿ ಸಂಜಯನಗರ, ಗಂಗಾನಗರ, ಗಂಗೇನಹಳ್ಳಿ, ಜೆ.ಸಿ.ನಗರದಲ್ಲಿ ಬಿಜೆಪಿ, ರಾಧಾಕೃಷ್ಣ ದೇವಸ್ಥಾನ, ನಾಗೇನಹಳ್ಳಿ ವಾರ್ಡ್‌ನಲ್ಲಿ ಜೆಡಿಎಸ್‌ ಮತ್ತು ಹೆಬ್ಬಾಳ, ಮನೋರಾಯನಪಾಳ್ಯದಲ್ಲಿ ಕಾಂಗ್ರೆಸ್‌ ಪಾಲಿಕೆ ಸದಸ್ಯರಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿಯಾಗಿರುವ ಭೈರತಿ ಸುರೇಶ್‌ ಅವರು ಕುರುಬರ ಮತ್ತು ಮುಸ್ಲಿಮರ ಮತ ಸೇಳೆಯುವ ಪ್ರಯತ್ನ ಆರಂಭಿಸಿದ್ದಾರೆ.

ಜೆಡಿಎಸ್‌ನ ಹನುಮಂತೇಗೌಡ ಅವರು ಒಕ್ಕಲಿಗ ಹಾಗೂ ದಲಿತರ ಮತದ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರು ಗೆಲುವಿಗಾಗಿ ವಿವಿಧ ರೀತಿಯಲ್ಲಿ ಪ್ರಚಾರ ತಂತ್ರ ನಡೆಸುತ್ತಿದ್ದಾರೆ. ಸೇನಾ ಕ್ಯಾಂಪ್‌ಗೆ ಕೇಂದ್ರ ಸಚಿವರ ಜತೆ ಹೋಗಿ ಮತಯಾಚನೆ ಮಾಡಿದ್ದಾರೆ. ಕ್ಷೇತ್ರದ ಎಲ್ಲಾ ವಲಯ, ವರ್ಗದ ಮತದಾರರ ಸಭೆಯನ್ನು ನಡೆಸಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಇದಕ್ಕೆ ಹೊರತಾಗಿಲ್ಲ. ಗೆಲ್ಲಲು ಬೇಕಾದ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. 2.52 ಲಕ್ಷಕ್ಕಿಂತ ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ 60 ಸಾವಿರ, ಮುಸ್ಲಿಂ ಸಮುದಾಯದ 35 ಸಾವಿರ, ಕುರುಬ ಮತ್ತು ಬಣಜಿಗರ 25 ಸಾವಿರ, ತೆಲುಗು ಬ್ರಾಹ್ಮಣರ 25 ಸಾವಿರ, ಕ್ರಿಶ್ಚಿಯನ್‌ ಸಮುದಾಯದ 8 ಸಾವಿರ ಮತಗಳಿದ್ದು, ಕೊಳಗೇರಿ ಮತ್ತು ಮಧ್ಯಮ ವರ್ಗದ ಮತದಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಕ್ಷೇತ್ರದಲ್ಲಿ ಮೂರು ದೊಡ್ಡ ಕೊಳಗೇರಿ ಇದೆ. ಮನೋರಾಯನಪಾಳ್ಯ, ಜೆ.ಸಿ.ನಗರ, ಹೆಬ್ಬಾಳ ಮೊದಲಾದ ಭಾಗದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬ ಹೆಚ್ಚಿದೆ. ಗುಡ್ಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ, ಒಳಚರಂಡಿ ಸಮಸ್ಯೆ ಸೇರಿದಂತೆ ನಿತ್ಯವೂ ಮತದಾರರನ್ನು ಕಾಡುವ ಸಾಕಷ್ಟು ಜ್ವಲಂತ ಸಮಸ್ಯೆಗಳು ಈ ಕ್ಷೇತ್ರದಲ್ಲಿದೆ. ಅಂತಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ತ್ವರಿತವಾಗಿ ಬೆಳೆದಿರುವ ಈ ಕ್ಷೇತ್ರದಲ್ಲಿ ಟ್ರಾಫಿಕ್‌ ಸಮಸ್ಯೆ ಹೇಳತೀರದಷ್ಟಿದೆ. ಮತಯಾಚನೆಗೆ ಬರುವ ರಾಜಕೀಯ ನಾಯಕರು ಈ ಎಲ್ಲ ಸಮಸ್ಯೆಯ ಬಿಸಿ ತಟ್ಟುತ್ತಿದೆ. ಇದೆಲ್ಲದರ ನಡುವೆಯೂ ಮತ ಬೇಟೆ ಚುರುಕಿನಿಂದ ಸಾಗುತ್ತಿದೆ.

* ರಾಜು ಖಾರ್ವಿ ಕೊಡೇರಿ

-Udayavani

Comments are closed.