ಕರ್ನಾಟಕ

ಮತಕ್ಕಾಗಿ ಆಣೆ ಪ್ರಮಾಣ; ಧರ್ಮಸ್ಥಳಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ವಶ

Pinterest LinkedIn Tumblr


ಚಿಕ್ಕಮಗಳೂರು: ಬಿಜೆಪಿಗೆ ಮತ ಹಾಕುವಂತೆ ಪ್ರಮಾಣ ಮಾಡಿಸಲು ಜನರನ್ನು ಧರ್ಮಸ್ಥಳಕ್ಕೆ ಕರೆದೊಯ್ಯುತ್ತಿದ್ದ ಎರಡು ಬಸ್‌ಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಖರಾಯಪಟ್ಟಣದ ಕೇತಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಮತದಾರರನ್ನು ಸೆಳೆಯಲು ಧರ್ಮಸ್ಥಳ ಪ್ರವಾಸದ ಆಮಿಷ ಒಡ್ಡಿ ಕೇತಮಾರನಹಳ್ಲಿ ಮತ್ತು ಗೊಲ್ಲರಹಟ್ಟಿಯಿಂದ ಎರಡು ಬಸ್‌ಗಳಲ್ಲಿ ಜನರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಅಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿಗೆ ಮತ ಹಾಕುತ್ತೇವೆ ಎಂದು ಜನರಿಂದ ಪ್ರಮಾಣ ಮಾಡಿಸುವ ಕುತಂತ್ರ ರೂಪಿಸಲಾಗಿತ್ತು. ಇದು ಸಿಟಿ ರವಿ ಬಾವಮೈದುನ ಸುದರ್ಶನ್ ಹಾಗೂ ಬಿಜೆಪಿ ಕಾರ್ಯಕರ್ತರ ಪ್ಲ್ಯಾನ್ ಎಂದು ಹೇಳಲಾಗುತ್ತದೆ.

ಈ ಎರಡು ಗ್ರಾಮದ ವ್ಯಾಪ್ತಿಯಲ್ಲಿ ವೀರಶೈವ ಹಾಗೂ ಗೊಲ್ಲ ಸಮುದಾಯದ 650ಕ್ಕೂ ಹೆಚ್ಚು ಮತದಾರರಿದ್ದು, ಅವರೆಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ಒಲವು ತೋರಿದ್ದರು. ಇದನ್ನು ತಪ್ಪಿಸಲು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ಹುನ್ನಾರ ನಡೆಸಲಾಗಿತ್ತು. ನಿನ್ನೆ ರಾತ್ರಿಯೇ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಬಂದಿತ್ತು ಎಂದು ಹೇಳಲಾಗುತ್ತಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಚುನಾವಣಾಧಿಕಾರಿ ತುಷಾರ್ ಮಣಿ ಎರಡು ಕೆಎಸ್ಆರ್‌ಟಿಸಿ ಬಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಸ್‌ನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಜನರನ್ನು ಮನೆಗೆ ಕಳುಹಿಸಲಾಗಿದೆ.

ಚುನಾವಣೆ ಗೆಲ್ಲಲು ಸಿ ಟಿ ರವಿ ಬೆಂಬಲಿಗರು ಇಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Comments are closed.