ಕರಾವಳಿ

ಮೇ 11 ಮತ್ತು 12 ರಂದು ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ : ಚುನಾವಣಾಧಿಕಾರಿ

Pinterest LinkedIn Tumblr

ಮಂಗಳೂರು ಮೇ. 09: ಪ್ರಸಕ್ತ ವಿಧಾನಸಭಾ ಚುನಾವಣೆ ಅಂಗವಾಗಿ ಮತದಾನ ನಡೆಯುವ ದಿನದ 48 ಗಂಟೆಗಳ ಅವಧಿಯೊಳಗೆ ಅಂದರೆ ಮೇ 11 ಮತ್ತು 12ರ ಯಾವುದೇ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಸಬೇಕಿದ್ದಲ್ಲಿ, ಅಂತಹ ಜಾಹೀರಾತಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ದ.ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಯಾವುದೇ ಪತ್ರಿಕೆಗಳಲ್ಲಿ ಮೇ 11 ಮತ್ತು 12 ರಂದು ಚುನಾವಣಾ ಜಾಹೀರಾತು ಪ್ರಕಟಿಸಲು ಬಯಸುವ ಅಭ್ಯರ್ಥಿಗಳು, ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳೊಂದಿಗೆ, ನಿಗಿದಿತ ನಮೂನೆಯಲ್ಲಿ ಮೇ 10 ರ ಒಳಗಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಅರ್ಜಿ ಸಲ್ಲಿಸಬೇಕು. ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪ್ರಮಾಣ ಪತ್ರ ಇಲ್ಲದೇ ಇರುವ ಚುನಾವಣಾ ಸಂಬಂಧಿತ ಜಾಹೀರಾತುಗಳನ್ನು ಯಾವುದೇ ಪತ್ರಿಕೆಗಳು ಮೇ 11 ಮತ್ತು 12 ರಂದು ಪ್ರಕಟಿಸುವಂತಿಲ್ಲ.

ಮುದ್ರಣ ಮಾಧ್ಯಮದಲ್ಲಿ ಚುನಾವಣೆ ಸಂಬಂಧಿತ ಜಾಹೀರಾತು ಪ್ರಕಟಣೆಗೆ ಪೂರ್ವಾನುಮತಿ ಪಡೆಯಲು ಅಗತ್ಯವಿರುವ ನಿಗದಿತ ಅರ್ಜಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಎಂ.ಸಿ.ಎಂ.ಸಿ ವಿಭಾಗದಿಂದ ಪಡೆಯಬಹುದು.

ಮತದಾನಕ್ಕೆ ನಿಗಿದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮೊದಲು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ-1951ರ ಕಲಂ 126 ರ ಪ್ರಕಾರ ನಿಷೇಧಿಸಲಾಗಿದೆ. ಚುನಾವಣಾ ಸಂಬಂಧಿ ವಿಷಯವೆಂದರೆ, ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವಂತಹ ವಿಷಯಗಳಾಗಿರುತ್ತದೆ. ಟವಿ, ರೇಡಿಯೋ, ಕೇಬಲ್ ನೆಟ್ವರ್ಕ್ ಮತ್ತು ಎಲ್ಲಾ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಸಂಬಂಧಿತ ವಿಷಯಗಳು ಪ್ರಸಾರ ಮಾಡದಂತೆ ಕ್ರಮವಹಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರು (ಪ್ಯಾನಲಿಸ್ಟ್) ಯಾವುದೇ ಕ್ಷೇತ್ರದ ಅಭ್ಯರ್ಥಿಗಳ ಪರ ಅಥವಾ ವಿರೋಧವಾಗಿರುವ ಅಭಿಪ್ರಾಯಗಳು, ಮನವಿಗಳು ಮತ್ತು ಚುನಾವಣಾ ಫಲಿತಾಂಶ ಮೇಲೆ ಪ್ರಭಾವ ಬೀರುವಂತಹ ವಿಷಯಗಳನ್ನು ಕೂಡ ಪ್ರಸಾರ ಮಾಡುವಂತಿಲ್ಲ.

ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆ 2018 ರ ಅಂಗವಾಗಿ ಮೇ 12 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎಲ್ಲಾ ಮುದ್ರಣ ಮಾಧ್ಯಮಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ನಿರ್ದೇಶಗಳನ್ನು ಮೇ 10 ರಂದು ಸಂಜೆ 6 ಗಂಟೆಯಿಂದ ಮೇ 12 ರಂದು ಸಂಜೆ 6:30 ಗಂಟೆಯ ವರೆಗೆ ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆ ಸುಗಮವಾಗಿ ನಡೆಯಲು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Comments are closed.