ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಯನ್ನು ಮನೆಗೆ ಕಳಿಸಿ: ಅಸಾದುದ್ದೀನ್ ಓವೈಸಿ

Pinterest LinkedIn Tumblr


ದಾವಣಗೆರೆ: ಕರ್ನಾಟಕವನ್ನು ಸಿದ್ದರಾಮಯ್ಯ ಅವರಿಂದ, ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಎಲ್ಲೆಡೆ ಪ್ರಾದೇಶಿಕ ಪಕ್ಷಗಳು ಅಧಿಕಾರ ಹಿಡಿಯಬೇಕಿದೆ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

ಇಲ್ಲಿನ ಬೂದಾಳ್‌ ರಸ್ತೆಯ ಬಿ.ಎನ್‌. ಬಡಾವಣೆಯಲ್ಲಿ ಬುಧವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಅಮಾನುಲ್ಲಾ ಖಾನ್‌ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನನ್ನನ್ನು ಕೋಮುವಾದಿ, ಪ್ರಚೋದನಕಾರಿ ಭಾಷಣಕಾರ ಎಂದು ಕಾಂಗ್ರೆಸ್‌ ಜರಿಯುತ್ತದೆ. ಆದರೆ, ಈಚೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸಲ್ಮಾನ್‌ ಖುರ್ಷಿದ್‌, ಕಾಂಗ್ರೆಸ್‌ನ ಕೈಗಳಿಗೆ ಮುಸ್ಲಿಮರ ರಕ್ತದ ಕಲೆಗಳು ಅಂಟಿವೆ ಎಂದು ಹೇಳಿದ್ದಾರೆ. ಹಾಗಾದರೆ ಜಾತ್ಯತೀತವಾದಿಗಳು ಯಾರು’ ಎಂದು ಪ್ರಶ್ನಿಸಿದರು.

‘ಈಚೆಗೆ ಜಮ್ಮುವಿನ ಕಠುವಾದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು. ಈ ಪ್ರಕರಣದ ಆರೋಪಿಗಳಲ್ಲೊಬ್ಬ ಗುಲಾಂ ನಬಿ ಆಜಾದ್‌ ಬೆಂಬಲಿಗ. ಇದು ಕಾಂಗ್ರೆಸ್‌ನ ಅಸಲಿ ಜಾತ್ಯತೀತ ಮುಖ’ ಎಂದು ಓವೈಸಿ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಪಕ್ಷವು ಮುಸ್ಲಿಮರಲ್ಲಿ ಭೀತಿ ಹುಟ್ಟಿಸಿ ದಶಕಗಳಿಂದ ಮತ ಹಾಕಿಸಿಕೊಳ್ಳುತ್ತಿದೆ. ಮುಂದೆ ಈ ಆಟ ನಡೆಯುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗೂ ಹೆದರಬೇಕಾಗಿಲ್ಲ. ಮುಸ್ಲಿಮರು ಪ್ರಾದೇಶಿಕ ಪಕ್ಷಗಳಿಗೆ ಮತ ಹಾಕಿ’ ಎಂದು ಮನವಿ ಮಾಡಿದರು.

Comments are closed.