ಕರ್ನಾಟಕ

ಎಸ್ಸೆಸ್ಸೆಲ್ಸಿ ಫೇಲ್ ಆದವರಿಗೆ ಸಂತಸದ ವಿಷಯ ! ಹೊಸದಾಗಿ ಎಲ್ಲಾ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ!

Pinterest LinkedIn Tumblr

ಬೆಂಗಳೂರು: ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೊಂಚ ನಿರಾಳರಾಗುವ ವಿಷಯವಿದು. ಈ ವರ್ಷ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಹೊಸ ಅಭ್ಯರ್ಥಿಗಳಾಗಿ ಮತ್ತೆ ಪರೀಕ್ಷೆ ಬರೆಯಬಹುದು. ಮುಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಅವರ ಅಂಕಪಟ್ಟಿಯಲ್ಲಿ ದ್ವಿತೀಯ ಪ್ರಯತ್ನ ಎಂಬ ಹೇಳಿಕೆ ಮುದ್ರಿಸಲಾಗುವುದಿಲ್ಲ.

ಎಸ್ಎಸ್ಎಲ್ ಸಿ 2018ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಸೇರಿ ನಿಯಮಿತ ವಿದ್ಯಾರ್ಥಿಗಳಂತೆಯೇ ಕಲಿತು ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಬಹುದು. ಆದರೆ ಅವರು ಮತ್ತೆ ಅಧ್ಯಯನ ಮಾಡಿ ಎಲ್ಲಾ ವಿಷಯಗಳ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳ ಪ್ರಕಾರ, ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಬಹುದು. ಆದರೂ ಈ ಸುತ್ತೋಲೆ ಕಡ್ಡಾಯವಲ್ಲ, ಆಸಕ್ತಿಯಿರುವವರು ಶಾಲೆಗೆ ಪುನಃ ಸೇರಿ ನಿಯಮಿತ ವಿದ್ಯಾರ್ಥಿಗಳಂತೆಯೇ ದಾಖಲಾತಿ ಮಾಡಿಕೊಂಡು ಮುಂದಿನ ವರ್ಷ ಪರೀಕ್ಷೆ ಬರೆಯಬಹುದು.

ಈ ವ್ಯವಸ್ಥೆ ಜಾರಿಗೆ ತಂದರೂ ಕೂಡ ದ್ವಿತೀಯ ಪ್ರಯತ್ನದಲ್ಲಿ ಪರೀಕ್ಷೆ ಬರೆಯುವ ಅವಕಾಶ ಕೂಡ ವಿದ್ಯಾರ್ಥಿಗಳಿಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಎಸ್ಎಸ್ಎಲ್ ಸಿಯಲ್ಲಿ ಅನುತ್ತೀರ್ಣರಾದವರು ನಂತರ ಅಲ್ಲಿಗೇ ಶಿಕ್ಷಣ ಮೊಟಕುಗೊಳಿಸಿ ಕೂಲಿ ನೌಕರಿಗೆ ಹೋಗುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಮೊದಲ ದಿನದಲ್ಲಿ 7,500 ಅರ್ಜಿಗಳು: ಉತ್ತರ ಪತ್ರಿಕೆಗಳ ಸ್ಕಾನ್ ಪ್ರತಿ ಮತ್ತು ಮರು ಮೌಲ್ಯಮಾಪನಕ್ಕೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಗೆ 7,500 ಅರ್ಜಿಗಳು ಆನ್ ಲೈನ್ ನಲ್ಲಿ ಬಂದಿವೆ. ಇವು ಉತ್ತರ ಪತ್ರಿಕೆಗಳ ಸ್ಕಾನ್ ಪ್ರತಿ ಬೇಕೆಂದು ಕೇಳಿ ಬಂದ ಅರ್ಜಿಗಳು. ಉತ್ತರ ಪತ್ರಿಕೆಗಳನ್ನು ಆನ್ ಲೈನ್ ನಲ್ಲಿ ಕಳುಹಿಸಲಾಗುತ್ತಿದ್ದು ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲಿಯೇ ತಮ್ಮ ಅನುಕೂಲಕ್ಕೆ ತಕ್ಕಂತೆ ಉತ್ತರ ಪತ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

Comments are closed.